ಸಾರ್ವಜನಿಕರಿಗೆ ವಿಶೇಷ ಮಾಹಿತಿ ನೀಡುವ ಆಗರ ಕೋಡಿಂಬಾಡಿ `ನಿರೆಲ್’ ಬಸ್ ನಿಲ್ದಾಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿಯ ವಿನಾಯಕನಗರದ ಬಸ್ ನಿಲ್ದಾಣ ಪ್ರಯಾಣಿಕರಿಗೆ ಮಳೆಗಾಲ ಮತ್ತು ಬೇಸಗೆಯಲ್ಲಿ ಆಶ್ರಯದಾಣವಾಗಿರುವುದಲ್ಲದೆ, ವಿಶೇಷ ಮಾಹಿತಿಯುಳ್ಳ ಆಗರವಾಗಿದೆ ಮತ್ತು ಇದು ಜಿಲ್ಲೆಯಲ್ಲೇ ವಿನೂತನ ಬಸ್ ನಿಲ್ದಾಣವಾಗಿದೆ.

ಸಮಾನ ಮನಸ್ಕರಿಂದ ನಿರ್ಮಿಸಲ್ಪಟ್ಟಿರುವ `ನಿರೆಲ್’ (ನೆರಳು) ಹೆಸರಿನ ಈ ಬಸ್ ನಿಲ್ದಾಣ ಕೋಡಿಂಬಾಡಿಯ ನಿವಾಸಿ ಯೋಗೇಶ್ ಸಾಮಾನಿಯ ಕಲ್ಪನೆಯ ಕೂಸಾಗಿದೆ. ಹಳೆಯ ಬಸ್ ನಿಲ್ದಾಣ ನೆಲಸಮಗೊಳಿಸಿ ಸುಮಾರು 20,000ರಿಂದ 24,000 ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣ ದೇವಸ್ಥಾನ, ಮಸೀದಿ ಮತ್ತು ಚರ್ಚಿನ ಪ್ರಮುಖರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿದೆ.

ಗ್ರಾಮದ ಜನರ ಪ್ರಯತ್ನದಿಂದ ಬಸ್ ನಿಲ್ದಾಣ ಸ್ಥಾಪನೆಗೊಂಡಿದೆ. ಇದರಲ್ಲಿ ಪ್ರವಾಸಿಗರ ದೈನಂದಿನ ಜೀವನಕ್ಕೆ ಅಗತ್ಯವೆನ್ನಲಾದ ಫೋನ್ ನಂಬರುಗಳ ಪಟ್ಟಿ ಒದಗಿಸಲಾಗಿದೆ ಎಂದು ಸಾಮಾನಿ ಹೇಳಿದ್ದಾರೆ.

ಹೊಸ ಬಸ್ ನಿಲ್ದಾಣದಲ್ಲಿ ಬಾಡಿಗೆ ರಿಕ್ಷಾ, ಜೀಪ್, ಟೆಂಪೋ, ಕಾರು, ಶಾಮಿಯಾನ ಮತ್ತು ಲೈಟಿಂಗ್ ಮಾಲಕರ ಫೋನ್ ನಂಬ್ರ ಒದಗಿಸಲಾಗಿದೆ. ಜೊತೆಗೆ ಪೂಜಾಸ್ಥಳಗಳು, ಉಪ್ಪಿನಂಗಡಿ ಮತ್ತು ಪುತ್ತೂರಿನ ಆಸ್ಪತ್ರೆಗಳ ತುರ್ತು ಸೇವೆಯ ಸಂಪರ್ಕ ನಂಬ್ರ, ಪುತ್ತೂರು ಉಪಾಯುಕ್ತ, ಸಹಾಯಕ ಆಯುಕ್ತ, ಪೋಸ್ಟಲ್ ಇಲಾಖೆ, ಬಿಎಸ್ಸೆನ್ನೆಲ್, ಪುತ್ತೂರು ಶಾಸಕ, ಜಿ ಪಂ, ತಾ ಪಂ, ತಹಶೀಲ್ದಾರ್ ಕಚೇರಿ ಕಚೇರಿ ನಂಬ್ರಗಳು, ಅಂತ್ಯಕ್ರಿಯೆ ವಾಹನ, ಸ್ಮಶಾನಭೂಮಿ ನಂಬ್ರ, ಪೊಲೀಸ್, ಅಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ನಂಬ್ರಗಳೂ ಇಲ್ಲಿ ಲಭ್ಯವಿದೆ.

ಸಾಮಾನ್ಯವಾಗಿ ಹೊಸ ಬಸ್ ನಿಲ್ದಾಣಗಳಲ್ಲಿ ಉದ್ಯಮಗಳಿಗೆ ಸಂಬಂಧಿಸಿದ ಮಾಹಿತಿ ಜಾಹೀರಾತುಗಳು ರಾರಾಜಿಸುತ್ತವೆ. ಆದರೆ ಇಲ್ಲಿ ಜನಸಾಮಾನ್ಯರಿಗೆ ಅಗತ್ಯವಿರುವ ಫೋನ್ ನಂಬ್ರಗಳು ಮಾತ್ರ ಅನಾವರಣಗೊಂಡಿವೆ. ಬಸ್ ನಿಲ್ದಾಣದ ಗೋಡೆಗಳಲ್ಲಿ ಸಾರ್ವಜನಿಕರಲ್ಲಿ ನೈರ್ಮಲ್ಯ ವಿಷಯದಲ್ಲಿ ಜಾಗೃತಿ ಹುಟ್ಟಿಸುವಂತಹ ಬರೆಹಗಳು ಜಾಹೀರುಗೊಂಡಿವೆ.