ಕಿರಿದಾದ ರಸ್ತೆ ಪಕ್ಕ ನಿರ್ಮಿಸಿದ ಕೋಡಿಕಲ್ ದೇವಳ ಕಟ್ಟಡ, ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬ್ರಹ್ಮಕಲಶೋಕತ್ಸವ ಅದ್ಧೂರಿಯಾಗಿ ನಡೆಯುತ್ತಿರುವ ಕೋಡಿಕಲ್ ಕುರು ಅಂಬಾ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪ್ರಸ್ತುತ ಈ ದೇವಸ್ಥಾನದ ಅತ್ಯಂತ ಕಿರಿದಾದ ರಸ್ತೆ ಪಕ್ಕ ಸೆಟ್ ಬ್ಯಾಕ್ ನಿಯಮಾವಳಿ ಉಲ್ಲಂಘಿಸಿ ನಿರ್ಮಾಣಗೊಂಡಿದ್ದು ದೇವಳ ಆಡಳಿತ ಬಗ್ಗೆ ಸುತ್ತಲಿನ ನಾಗರಿಕರನೇಕರಿಂದ ದೂರುಗಳು ಕೇಳಿಬಂದಿವೆ.

ಕೊಟ್ಟಾರ ರಾಷ್ಟ್ರೀಯ ಹೆದ್ದಾರಿಯಿಂದ ಒಂದೂವರೆ ಕಿ ಮೀ ದೂರದಲ್ಲಿ ಕೋಟಿಗಟ್ಟಲೆ ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿರುವ ಈ ದೇವಳದಲ್ಲಿ ವಾಹನಗಳ ಪಾರ್ಕಿಂಗಿಗೆ  ಸ್ಥಳವೇ ಇಲ್ಲ. ರಸ್ತೆ ಮೇಲೆಯೇ ಎಲ್ಲಾ ವಾಹನಗಳನ್ನೂ ಪಾರ್ಕ್ ಮಾಡಲಾಗುತ್ತಿದೆ. ಇದರಿಂದ ಉಳಿದ ರಸ್ತೆ ಬಳಕೆದಾರರು ತೊಂದರೆ ಅನುಭವಿಸಬೇಕಾಗದೆ. ಅತ್ಯಂತ ಕಿರಿದಾದ ಈ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟಕರವಾಗಿರುವಾಗ ಒಂದು ಕಡೆಯಲ್ಲಿ ಕಾರುಗಳನ್ನು ಸಾಲು ಸಾಲಾಗಿ ರಸ್ತೆಯಲ್ಲಿಯೇ ನಿಲ್ಲಿಸಿದ್ದರೆ, ಇನ್ನೊಂದು ಕಡೆಯಲ್ಲಿ ಬೈಕುಗಳನ್ನು ನಿಲ್ಲಿಸಲಾಗಿದೆ. ಇನ್ನು ಭಕ್ತಾದಿಗಳು ಬರುವ ವಾಹನಗಳನ್ನು ಪಾರ್ಕಿಂಗ್ ಮಾಡಲು ಜಾಗವೂ ಇಲ್ಲದೇ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಸೆಟ್‍ಬ್ಯಾಕ್ ಬಿಡದೇ ದೇಗುಲವನ್ನು ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳ ಕ್ರಿಮಿನಲ್ ನಿರ್ಲಕ್ಷ್ಯ ಇಲ್ಲಿ ಕಂಡುಬರುತ್ತಿದೆ.

ಮಾರ್ಗದ ಮಟ್ಟದಿಂದ ಬಹಳಷ್ಟು ಎತ್ತರದಲ್ಲಿ ದೇವಾಲಯವಿರುವುದರಿಂದ ಮಳೆಗಾಲದಲ್ಲೂ ಇಲ್ಲಿಗೆ ಆಗಮಿಸುವ ಭಕ್ತಾದಿಗಳು ಅತ್ಯಂತ ಎಚ್ಚರದಿಂದ ತೆರಳಬೇಕಾದ ಅನಿವಾರ್ಯತೆ ಇದೆ. ದೇವಾಲಯದ ಪ್ರಮುಖ ದ್ವಾರವೂ ನೇರವಾಗಿ ರಸ್ತೆಗೇ ಮುಖಮಾಡಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.

ಇನ್ನು ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿನಿತ್ಯ ಮುಂಜಾನೆ ಮತ್ತು ರಾತ್ರಿ ವೇಳೆಯಲ್ಲಿ ಮೈಕಾಸುರ ಆರ್ಭಟ ವಿಪರೀತವಾಗಿದೆ. ಬೆಳ್ಳಂಬೆಳಿಗ್ಗೆ ಕಿವಿಗಡಚ್ಚಿಕ್ಕುವ ಸದ್ದಿನಲ್ಲಿ ಮೈಕ್ ಹಾಕಲಾಗುತ್ತಿದೆ. ಇಲ್ಲಿನ ಕೆಲವು ಯುವ ಸ್ವಯಂಸೇವಕರು ತಮಗಿಷ್ಟ ಬಂದಂತೆ ದೊಡ್ಡದಾಗಿ ಭಕ್ತಗೀತೆಗಳನ್ನು ಹಾಕುತ್ತಿರುವುದರಿಂದ ಅಕ್ಕಪಕ್ಕದ ನಿವಾಸಿಗಳೂ ಕಂಗೆಡುವಂತಾಗಿದೆ ಎಂದು ಕೆಲವರು `ಕರಾವಳಿ ಅಲೆ’ಗೆ ದೂರಿದ್ದಾರೆ. ಇನ್ನು ಕ್ಷೇತ್ರದಲ್ಲಿ ರಾಜಕೀಯ ವ್ಯಕ್ತಿಗಳ ಕೊರೆತ ಬೇರೆ ಕೇಳಬೇಕಾಗಿದೆ.

ಇನ್ನು ಮುಂಜಾನೆ 6 ಗಂಟೆಗೆ ಮೈಕಾಸುರನ ಆರ್ಭಟ ಶುರುವಾದರೆ ತಡರಾತ್ರಿಯವರೆಗೂ ಕಾರ್ಯಕ್ರಮಗಳು ಕೇಳಿ ಬರುತ್ತಿವೆ ಅನ್ನುವ ದೂರು ಕೆಲವರದ್ದು. ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಿ ಎಂದು ನ್ಯಾಯಾಲಯವೇ ಆದೇಶ ಹೊರಡಿಸಿದ್ದರೂ, ದೇವಸ್ಥಾನದ ಆಸುಪಾಸಿನಲ್ಲಿ ವೃದ್ಧರು, ಅಶಕ್ತರಿಗೆ ಇದರಿಂದ ತೊಂದರೆ ಆಗುತ್ತಿದ್ದರೂ ದೇವಸ್ಥಾನದ ಆಡಳಿತ ಮಂಡಳಿ ಇಂತಹ ವಿಚಾರದಲ್ಲಿ ಜಾಣ ಮೌನಕ್ಕೆ ಶರಣಾಗಿದೆ ಅಂತಾರೆ ಸ್ಥಳೀಯರು.

ದೇವಸ್ಥಾನದ ಹೊರಭಾಗದಲ್ಲಿ ಮೊದಲೇ ಅತ್ಯಂತ ಕಿರಿದಾದ ಜಾಗವಿದ್ದು, ಇಲ್ಲಿ ಪಾರ್ಕಿಂಗ್ ಮಾಡುವ ಮೂಲಕ ಮೊದಲೇ ಇಕ್ಕಟ್ಟಾಗಿದೆ. ಈ ನಡುವೆ ಇಲ್ಲಿ ಇದೀಗ ದೇವಸ್ಥಾನದ ಪರಿವಾರ ದೇವರ ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಇನ್ನೊಂದು ಸ್ವಾಗತ ದ್ವಾರ ನಿರ್ಮಿಸಲು ಸ್ವಯಂಸೇವಕರು ಬುಧವಾರ ರಾತ್ರಿ  ಎರಡು ಕಡೆಗಳಲ್ಲಿ ಅಗೆದು ಹಾಕಿದ್ದು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಆದರೆ ಅಳವಡಿಸಿದ ಇಂಟರಲಾಕ್‍ಗಳನ್ನು ಯಾರ ಅನುಮತಿ ಮೇಲೆ ಅಗೆದು ತೆಗೆಯಲಾಗಿದೆ ಎಂಬ ಬಗ್ಗೆ ಅಲ್ಲಿ ಯಾರಲ್ಲೂ ಉತ್ತರವಿಲ್ಲ.