ವರುಣನ ಆರ್ಭಟದ ನಡುವೆ ಗೆದ್ದ ಕೆಕೆಆರ್ ಕ್ವಾಲಿಫೈಯರ್ ಪ್ರವೇಶ

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್  ಈ ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಉಳಿಸಿಕೊಳ್ಳುತ್ತದೆ ಎನ್ನುವ ಲೆಕ್ಕಾಚಾರ ಕೈಕೊಟ್ಟಿದೆ. ವರುಣ ಕೃಪೆ ಒಂದು ಹಂತದಲ್ಲಿ ಹೈದರಾಬಾದಿಗೆ ವರವಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಮಳೆ ನಿಂತ ಮೇಲೆ ಈ ಲೆಕ್ಕಾಚಾರವೆಲ್ಲಾ ಬುಡಮೇಲಾಯಿತು. ಡಕ್ವರ್ಥ್ ಲೂಯಿಸ್ ಲೆಕ್ಕಾಚಾರದ ಪ್ರಕಾರ ಗೆಲುವಿನ ಟಾರ್ಗೆಟನ್ನು ಕಷ್ಟಪಟ್ಟು ತಲುಪಿದ ಗೌತಮ್ ಗಂಭೀರ್ ನಾಯಕತ್ವದ ಕೆಕೆಆರ್ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ.

ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ಹೈದರಾಬಾದ್ ತಂಡಕ್ಕೆ  ಸೋಲಿನ ಶಾಕ್ ನೀಡಲು ಸನ್ನದ್ದವಾಗಿದ್ಧಾಗ ಸುರಿದ ಭಾರಿ ಮಳೆ ಎಲ್ಲಿ  ಸಂಚಚಾರ ತರುತ್ತದೋ ಎನ್ನುವ ಆತಂಕ ಕೊನೆಗೆ ದೂರ ಸರಿಯಿತು.  ಕೆಕೆಆರ್ ತಂಡ  ಏಳು ವಿಕೆಟ್  ಅಂತರದಲ್ಲಿ ಪಂದ್ಯವನ್ನು ಗೆಲ್ಲುವುದರ ಮೂಲಕ  ಸನ್ ರೈಸರ್ಸ್ ಹೈದರಾಬಾದ್ ಟೂರ್ನಿಯಿಂದ ಹೊರಬಿತ್ತು.

ಮೇಲ್ನೋಟಕ್ಕೆ ಉಭಯ ತಂಡಗಳು ಬಲಿಷ್ಠವಾಗಿಯೇ ಈ ಟೂರ್ನಿಯಲ್ಲಿ ಕಾದಾಟ ನಡೆಸಿವೆ. ಲೀಗ್ ಹಂತದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಇತ್ತಂಡಗಳು ಸಮಬಲದ ಹೋರಾಟವನ್ನು  ನೀಡಿವೆ.  ಏಪ್ರಿಲ್-15ರಂದು ನಡೆದ ಮೊದಲ ಮುಖಾಮುಖಿಯಲ್ಲಿ ಕೋಲ್ಕತ್ತಾ ತಂಡಕ್ಕೆ 17 ರನ್ ಗೆಲುವು ದೊರೆತರೆ,  ಹೈದರಾಬಾದ್ ತಂಡ ಏಪ್ರಿಲ್-30ರಂದು ನಡೆದ ಮತ್ತೊಂದು ಪಂದ್ಯದಲ್ಲಿ ಕೋಲ್ಕತ್ತಾ ತಂಡವನ್ನು 48 ರನ್ ಅಂತರದಲ್ಲಿ ಮಣಿಸಿದೆ.

ಹೀಗಾಗಿ ಬುಧವಾರದ  ಪಂದ್ಯದಲ್ಲೂ ಇಂತಹ ಸಮಬಲದ ಹೋರಾಟವನ್ನೇ ನಿರೀಕ್ಷಿಸಲಾಗಿತ್ತು. ಆದರೆ, ಮೊದಲು ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ ನಾಯಕತ್ವ ದ ಹೈದರಾಬಾದ್ ತಂಡ ಸವಾಲಿನ ಮೊತ್ತವನ್ನು ಸೇರಿಸುವಲ್ಲಿ ವಿಫಲವಾಯಿತು. ಕೆಕೆಆರ್ ತಂಡದ ಬಲಿಷ್ಠ ಬೌಲಿಂಗ್ ಪಡೆ  ಹೈದರಾಬಾದ್ ಆಟಗಾರರನ್ನು ರನ್ನಿಗಾಗಿ ಪರದಾಡುವಂತೆ ಮಾಡಿತು.

ಉಮೇಶ್ ಯಾದವ್ (21 ರನ್ನಿಗೆ 2 ವಿಕೆಟ್), ನಥೆನ್ ಕೌಲ್ಟರ್ ನೈಲ್ (20 ರನ್ನಿಗೆ 3ವಿಕೆಟ್) , ಟ್ರೆಂಟ್ ಬೌಲ್ಟ್ (30 ರನ್ನಿಗೆ 1 ವಿಕೆಟ್) ಅವರುಗಳ ವೇಗದ ಬೌಲಿಂಗ್ ಹಾಗೂ  ಸುನಿಲ್ ನರೈನ್,  ಪಿಯೂಷ್ ಚೌಲಾ ಅವರ ಸ್ಪಿನ್ ದಾಳಿಗೆ ಹೈದರಾಬಾದ್ ಬ್ಯಾಟಿಂಗ್ ವಿಭಾಗ ಛಿದ್ರಗೊಂಡಿತು. ನಾಯಕ ಡೇವಿಡ್ ವಾರ್ನರ್ ಮಾತ್ರ ಕೊಂಚ ಹೋರಾಟ ನಡೆಸಿ ಗಳಿಸಿದ  37 ರನ್ ಗರಿಷ್ಠ ಸ್ಕೋರ್.  ಹಾಗಾಗಿ ಹೈದರಾಬಾದ್ ತಂಡ ನಿಗದಿತ 20 ಓವರುಗಳಲ್ಲಿ ಕೇವಲ 128 ರನ್ ಗಳಿಸಲು ಮಾತ್ರ ಶಕ್ತವಾಯಿತು.

ಈ ಜುಜುಬಿ ಮೊತ್ತವನ್ನು ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಸುಲಭವಾಗಿಯೇ ಬೆಂಬತ್ತುವ ವಿಶ್ವಾಸವನ್ನು ಹೊಂದಿತ್ತು. ಆದರೆ, ಈ ವಿಶ್ವಾಸಕ್ಕೆ ಮಳೆ ಅಡ್ಡಿಯಾಯಿತು. ಹೈದರಾಬಾದ್ ತಂಡದ ಇನ್ನಿಂಗ್ಸ್ ಮುಗಿಯುವವರೆಗೆ ಮಳೆಯ ಸುದ್ದಿಯೇ ಇರಲಿಲ್ಲ. ಕೆಕೆಆರ್ ತಂಡ ಇನ್ನೇನು ತನ್ನ  ಇನ್ನಿಂಗಿಗ್‍ನಾಟ ಆರಂಭಿಸುತ್ತದೆ ಎನ್ನುವಾಗಲೇ ಭಾರಿ ಮಳೆ ಸುರಿಯಿತು. ಸುಮಾರು ಎರಡು ಗಂಟೆಗೂ ಹೆಚ್ಚು  ಕಾಲ ಸ್ಥಗಿತಗೊಂಡಿದ್ದ ಪಂದ್ಯ ಮಧ್ಯರಾತ್ರಿ 12.55 ಗಂಟೆಗೆ  ಪುನರಾಂಭಗೊಂಡಿತು.

ಎಲಿಮಿನೇಟರ್ ಪಂದ್ಯಕ್ಕೆ  ಹೆಚ್ಚುವರಿ ದಿನ ನಿಗದಿಯಾಗದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ  ಕೆಕೆಆರ್ ತಂಡಕ್ಕೆ  ಆರು ಓವರುಗಳಲ್ಲಿ  48 ರನ್ ಗಳಿಸುವ ಗುರಿಯನ್ನು ನೀಡಲಾಯಿತು. ಈ ಗುರಿಯನ್ನು ಸುಲಭವಾಗಿ ಬೆನ್ನತ್ತುವ ಆತುರದಲ್ಲಿ ಕೆಕೆಆರ್ ಮೂರು ವಿಕೆಟ್ ಬಹುಬೇಗನೆ ಕಳೆದುಕೊಂಡಿತು. ಆದರೆ, ಒಂದು ಕಡೆ ಸ್ಥಿರವಾಗಿ ಬ್ಯಾಟಿಂಗ್ ನಡೆಸಿದ ನಾಯಕ ಗೌತಮ್ ಗಂಭೀರ್ ಅಜೇಯ 31 ರನ್ ಗಳಿಸಿ ಕೆಕೆಆರ್ ತಂಡಕ್ಕೆ ಏಳು ವಿಕೆಟುಗಳಿಂದ ಜಯ ತಂದುಕೊಟ್ಟರು.

ಹೈದರಾಬಾದ್ ತಂಡದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಕೆಆರ್ ತಂಡದ ವೇಗಿ ನಥೆನ್ ಕೌಲ್ಟರ್ ನೈಲ್ `ಪಂದ್ಯಶ್ರೇಷ್ಠ’ ಪ್ರಶಸ್ತಿಯಿಂದ ಪುರಸ್ಕೃತರಾದರು.   ಮೇ -19 ರಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.