ಕ್ರಿಸ್ ಲಿನ್, ಗಂಭೀರ್ ಸ್ಫೋಟಕ ಆಟ

ಕೆಕೆಆರ್ ನೋ ಲಾಸ್ ವಿನ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ರಾಜಕೋಟ್ : ಸಮಬಲರ ಕಾದಾಟವೆಂದು ಬಿಂಬಿತವಾದ ನಿನ್ನೆಯ (ಶುಕ್ರವಾರ) ಪಂದ್ಯದಲ್ಲಿ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎದುರಾಳಿ ಗುಜರಾತ್ ಲಯನ್ಸ್ ತಂಡವನ್ನು ಹತ್ತು ವಿಕೆಟುಗಳ ಅಂತರದಲ್ಲಿ ಪರಾಭವಗೊಳಿಸಿದೆ.

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಲಿನ್ ಹಾಗೂ ನಾಯಕ ಗೌತಮ್ ಗಂಭೀರ್ ಅವರ ಬಿರುಸಿನ ಆಟ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದು ಮಾತ್ರವಲ್ಲ ಅದ್ಭುತ ಜಯಕ್ಕೂ ಕಾರಣವಾಯಿತು. ಇವರಿಬ್ಬರೂ ಮೊದಲ ವಿಕೆಟಿಗೆ 184 ರನ್ನುಗಳನ್ನು ಸೇರಿಸಿ ಅಮೋಘ ಸಾಧನೆಗೈದರು.

ಗುಜರಾತ್ ಲಯನ್ಸ್ ನೀಡಿದ 183 ರನ್ನುಗಳ ಸವಾಲಿನ ಮೊತ್ತವನ್ನು ಕೆಕೆಆರ್ ತಂಡದ ಆರಂಭಿಕರಾದ ಕ್ರಿಸ್ ಲಿನ್ – ಗಂಭೀರ್ ಜೋಡಿ ಎದುರಾಳಿ ಬೌಲರುಗಳನ್ನು ದಣಿಸಿ ಬಿಟ್ಟರು. ಇವರ ಅಬ್ಬರದ ಆಟಕ್ಕೆ ಗುಜರಾತ್ ತಂಡದ ಎಲ್ಲಾ ಬೌಲರುಗಳು ದುಬಾರಿಯಾಗಿ ಬಿಟ್ಟರು. ಕ್ರಿಸ್ ಲಿನ್ 43 ಎಸೆತಗಳಲ್ಲಿ 93ರನ್ ಚಚ್ಚಿದರೆ, ಗೌತಮ್ ಗಂಭೀರ್ 48 ಎಸೆತಗಳಲ್ಲಿ 76 ರನ್ ಗಳಿಸಿದರು. ಇವರಿಬ್ಬರು ಅಜೇಯರಾಗಿ ಉಳಿದು ಇನ್ನೂ 31 ಎಸೆತಗಳು ಬಾಕಿ ಇರುವಂತೆ ತಂಡದ ಗೆಲುವಿಗೆ ಕಾರಣರಾದರು.

ರೈನಾ – ಕಾರ್ತಿಕ್

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಲಯನ್ಸ್ ತಂಡವು ಉತ್ತಮ ಆಟವನ್ನೇ ಪ್ರದರ್ಶಿಸಿದೆ. ನ್ಯೂಜಿಲೆಂಡ್ ಬ್ಯಾಟ್ಸಮನ್ ಬ್ರೆಂಡನ್ ಮೆಕ್ಲಮ್ 34 ರನ್ ಗಳಿಸಿ ಔಟಾದರೆ, ನಾಯಕ ಸುರೇಶ್ ರೈನಾ ಜವಾಬ್ದಾರಿಯುತ ಆಟವಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದವರು ದಿನೇಶ್ ಕಾರ್ತಿಕ್. ರೈನಾ-ಕಾರ್ತಿಕ್ ಜೋಡಿ 4ನೇ ವಿಕೆಟಿಗೆ 87 ರನ್ ಸೇರಿಸಿದ್ದು ಗುಜರಾತ್ ತಂಡದ ಹೈಲೈಟ್ಸ್. ಇವರಿಬ್ಬರ ಸ್ಪೂರ್ತಿಯ ಆಟದಿಂದ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 183 ರನ್ನುಗಳನ್ನು ಸೇರಿಸಿತು. ರೈನಾ 68 ರನ್ ಗಳಿಸಿದರೆ, ಕಾರ್ತಿಕ್ 47 ರನ್ ಗಳಿಸಿ ಔಟಾದರು.

ಹೋದ ವರ್ಷ `ಐಪಿಎಲ್’ಗೆ ಪಾದಾರ್ಪಣೆ ಮಾಡಿ ಅಮೋಘ ಆಟದ ಮೂಲಕ ಗಮನ ಸೆಳೆದಿದ್ದ ಗುಜರಾತ್ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು. ಆದರೆ, ಕೆಕೆಆರ್ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗಿನಲ್ಲಿ ಸಂಘಟಿತ ಪ್ರದರ್ಶನ ನೀಡಿ ಮೊದಲ ಪಂದ್ಯದಲ್ಲೇ ಗುಜರಾತ್ ತಂಡವನ್ನು ಸೋಲಿಸಿದೆ.


ಇಂದಿನ ಪಂದ್ಯ
1) ಸಂಜೆ 4.00 ಗಂಟೆ;
ಕಿಂಗ್ಸ್ ಇಲೆವೆನ್ / ರೈಸಿಂಗ್ ಪುಣೆ
2) ರಾತ್ರಿ 8.00 ಗಂಟೆ:
  ಆರ್ ಸಿ ಬಿ / ಡೆಲ್ಲಿ ಡೇರ್ ಡೆವಿಲ್ಸ್