ಕಳೆದ ಆರ್ಥಿಕ ವರ್ಷದ ಉತ್ಪಾದನಾ ಗುರಿ ತಲುಪಿದ ಕುದುರೆಮುಖ ಕಂಪೆನಿ

ಮಂಗಳೂರು : ಕುದುರೆಮುಖ  ಕಬ್ಬಿಣ ಅದಿರು ಕಂಪೆನಿ ಕಳೆದ ಆರ್ಥಿಕ ವರ್ಷದಲ್ಲಿ 14.64 ಲಕ್ಷ ಟನ್ ಕಬ್ಬಿಣದ ಅದಿರಿನ ಪೆಲ್ಲೆಟ್ ಉತ್ಪಾದಿಸಿ ತನ್ನ ಗುರಿಯನ್ನು ತಲುಪಿ ಮಹತ್ವದ ಬೆಳವಣಿಗೆ ಕಂಡುಕೊಂಡಿದೆ. ಇದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಉತ್ಪಾದನೆ ಕುಂಠಿತಕೊಂಡಿತ್ತಲ್ಲದೆ 2015-16ರಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆ ಒಂದು ಲಕ್ಷ ಟನ್ನಿಗೆ ಇಳಿದಿತ್ತು.

ಈ ವರ್ಷದ ಜನವರಿ ಮತ್ತು ಮಾರ್ಚ್ ತಿಂಗಳಲ್ಲಿ ಕಂಪೆನಿ  2.8 ಲಕ್ಷ ಟನ್ ಪೆಲ್ಲೆಟ್ ಉತ್ಪಾದಿಸಿದ್ದು ಕಳೆದ ಐದು ವರ್ಷಗಳಲ್ಲಿಯೇ ಅತ್ಯಧಿಕ ಮಾಸಿಕ ಉತ್ಪಾದನೆ ಇದಾಗಿದೆ. ಕಳೆದ ಎರಡು ವರ್ಷಗಳ ಮಾರಾಟ ದಾಖಲೆಯನ್ನೂ ಮೀರಿಸುವ ವಿಶ್ವಾಸ ಕಂಪೆನಿಗಿದ್ದು ಈಗಾಗಲೇ 13.86 ಲಕ್ಷ  ಡಿಎಂಟಿ ಕಬ್ಬಿಣದ ಅದಿರಿನ ಪೆಲ್ಲೆಟ್ ಗಳನ್ನು 26 ಹಡಗುಗಳಲ್ಲಿ ಸಾಗಾಟ ಮಾಡಲಾಗಿದ್ದು ಇವುಗಳಲ್ಲಿ  16 ಹಡಗುಗಳಲ್ಲಿನ ಕಬ್ಬಿಣದ ಅದಿರು ವಿದೇಶಗಳಿಗೆ ರಫ್ತಾಗಿವೆ, ಎಂದು ಕಂಪೆನಿಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮಲಯ್ ಚಟರ್ಜಿ ಹೇಳಿದ್ದಾರೆ.

ಕಂಪೆನಿ ಆರ್ಥಿಕ ಪುನರುಜ್ಜೀವನಕ್ಕೆ ಸಜ್ಜಾಗಿದ್ದು ಗಣಿಗಾರಿಕೆ ನಡೆಸಲು  ಪ್ರಸಕ್ತ ಬಳ್ಳಾರಿ ಜಿಲ್ಲೆಯ ದೇವದಾರಿ ರೇಂಜಿನಲ್ಲಿ 474 ಹೆಕ್ಟೇರ್ ಭೂಮಿ ಮಂಜೂರಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.