ಕುಡುಕರ ತಾಣವಾಗಿರುವ ಕಿನ್ನಿಗೋಳಿ ಬಸ್ ನಿಲ್ದಾಣ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿಯಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕುಡುಕರ ತಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆಲ ತಿಂಗಳಿನಿಂದ ಕಿನ್ನಿಗೋಳಿಯಲ್ಲಿ ನೂತನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಹಸಿರು ಬಣ್ಣದ ಟಾರ್ಪಾಲನ್ನು ಹೊದಿಕೆ ರೂಪದಲ್ಲಿ ಹೊದಿಸಲಾಗಿದೆ ಹಾಗೂ ಸ್ಥಳದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅದರ ಬದಿಯಲ್ಲಿ ತಗಡಿನ ಶೀಟು ಹಾಕಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕಲಾಗಿದೆ. ಆದರೆ ನಿಲ್ದಾಣದ ಕುರ್ಚಿಗಳನ್ನು ಕೆಲ ಮದ್ಯವ್ಯಸನಿಗಳು ತೆಗೆದುಕೊಂಡು ಬಂದು ನೂತನ ನಿಲ್ದಾಣದ ಕಾಮಗಾರಿ ಬಳಿ ಇರಿಸಿ ಮದ್ಯ ಕುಡಿದು ಅಂಗಾತ ಬಿದ್ದುಕೊಂಡಿರುತ್ತಾರೆ ಹಾಗೂ ಕುರ್ಚಿಗಳನ್ನು ಬಿಸಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೂಡಲೇ ಕಿನ್ನಿಗೋಳಿ ಪಂಚಾಯತಿ ನೂತನ ಬಸ್ ನಿಲ್ದಾಣ ಕಾಮಗಾರಿಯನ್ನು ಚುರುಕುಗೊಳಿಸಿ ನಿಲ್ದಾಣದಲ್ಲಿ ಮಲಗುವ ಮದ್ಯವ್ಯಸನಿಗಳ ವಿರುದ್ಧ ಕ್ರಮಕೈಗೊಳ್ಳಲು ಮುಲ್ಕಿ ಪೊಲೀಸರಿಗೆ ಸೂಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.