ಉಮೇಶ್ ಉಗ್ರ ದಾಳಿ, ಗಂಭೀರ್ ನಾಯಕನ ಆಟ

ನೈಟ್ ರೈಡರ್ಸಗೆ ಬೆದರಿದ ಕಿಂಗ್ಸ್ ಇಲೆವೆನ್

  • ಎಸ್ ಜಗದೀಶ್ಚಂದ್ರ ಅಂಚನ್

ಐಪಿಎಲ್ ಟೂರ್ನಿಯಲ್ಲಿ ಗುರುವಾರ ನಡೆದ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ  ಉತ್ತಮ ಪ್ರದರ್ಶನ ನೀಡಿ ಕಿಂಗ್ಸ್  ಇಲೆವೆನ್ ಪಂಜಾಬ್ ತಂಡವನ್ನು  ಎಂಟು ವಿಕೆಟಿಗಳಿಂದ ಮಣಿಸಿದೆ.

ಕೋಲ್ಕತ್ತಾದ  ಈಡನ್ ಗಾರ್ಡನ್ನಿನಲ್ಲಿ ನಡೆದ ಈ ಬಲಿಷ್ಠ  ತಂಡಗಳ  ಮುಖಾಮುಖಿ ಹಲವು  ಕುತೂಹಲಕ್ಕೆ ಕಾರಣವಾಗಿತ್ತು. ಏಕೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ ಎರಡು ಪಂದ್ಯಗಳಲ್ಲಿ ಜಯ ಗಳಿಸಿತ್ತು. ಹಾಗೆಯೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತವರು ನೆಲದಲ್ಲಿ ಗೆಲುವನ್ನು ಸಾಧಿಸಲೇ ಬೇಕೆಂಬ ಹಠದಲ್ಲಿತ್ತು. ಹಾಗಾಗಿ ಉಭಯ ತಂಡಗಳ ಈ ಸೆಣಸಾಟ ಪ್ರೇಕ್ಷಕರಲ್ಲಿ ರೋಚಕತೆ ಯನ್ನು ಸೃಷ್ಟಿಸಿತ್ತು.

ಗೆಲುವಿನ ಲೆಕ್ಕಾಚಾರದಲ್ಲಿದ್ದ ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಟಾಸ್ ಗೆದ್ದು  ಎದುರಾಳಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮೊದಲು ಬ್ಯಾಟಿಂಗಿಗೆ ಇಳಿಸಿದರು. ಪಂಜಾಬ್ ಆರಂಭಿಕರಾದ ಹಶೀಮ್ ಆಮ್ಲ ಹಾಗೂ ಮನನ್ ವೋರ ಮೊದಲ ವಿಕೆಟಿಗೆ 53 ರನ್  ಕಲೆ ಹಾಕಿದರು.

ಆದರೆ, ಇವರಿಬ್ಬರು ಔಟಾದ ಬಳಿಕ ಪಂಜಾಬ್ ಆಟಗಾರರನ್ನು ನಿಯಂತ್ರಿಸುವ ಬೌಲಿಂಗ್ ದಾಳಿ ಕೆಕೆಆರ್ ತಂಡದಿಂದ ನಡೆಯಿತು. ಅದರಲ್ಲೂ ವೇಗಿ ಉಮೇಶ್ ಯಾದವ್ ಉಗ್ರ ದಾಳಿಯಿಂದ ಪಂಜಾಬ್  20 ಓವರುಗಳಲ್ಲಿ  9 ವಿಕೆಟಿಗೆ 170 ರನ್ ಗಳಿಸಿತು. ಉಮೇಶ್ ಯಾದವ್  33ರನ್ನಿಗೆ 4ವಿಕೆಟ್ ಪಡೆದು ಮಿಂಚಿದರು.

ಪಂಜಾಬ್ ನೀಡಿದ 171 ರನ್ ಗೆಲುವಿನ ಗುರಿಯನ್ನು ಬೆಂಬತ್ತಿದ ಕೆಕೆಆರ್ ತಂಡ ಈ ಟಾರ್ಗೆಟನ್ನು 2 ವಿಕೆಟ್ ಕಳೆದುಕೊಂಡು ತಲುಪಿತು. ಗಾಯಾಳು ಕ್ರಿಸ್ ಲಿನ್ ಅನುಪಸ್ಥಿತಿಯಲ್ಲಿ  ಗೌತಮ್ ಗಂಭೀರ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ವಿಂಡೀಸ್ ಸ್ಪಿನ್ನರ್ ಸುನಿಲ್ ನರೈನ್ ಭರ್ಜರಿಯಾಗಿಯೇ ಬ್ಯಾಟ್ ಬೀಸಿದರು. ನರೈನ್ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರುಗಳಿಂದ 37 ರನ್ ಸಿಡಿಸಿದರು. ಇವರಿಗೆ ಒಳ್ಳೆಯ ಸಾಥ್ ನೀಡಿದ ನಾಯಕ ಗೌತಮ್ ಗಂಭೀರ್ 49 ಎಸೆತಗಳಲ್ಲಿ ಅಜೇಯ 72 ರನ್ ಗಳಿಸಿ ಕೆಕೆಆರ್ ತಂಡಕ್ಕೆ 8 ವಿಕೆಟುಗಳ ಜಯ ತಂದುಕೊಟ್ಟರು.

ಅಂತೂ ಕಿಂಗ್ಸ್ ಇಲೆವೆನ್ ತಂಡದ ಗೆಲುವಿನ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತವರು ನೆಲದಲ್ಲಿ ಭರ್ಜರಿ ಆಟದ ಮೂಲಕ ಗಮನಾರ್ಹ ಗೆಲುವನ್ನು ದಾಖಲಿಸಿ ಕೊಂಡಿತು. ಬ್ಯಾಟಿಂಗ್ ಹಾಗೂ ಬೌಲಿಂಗಿನಲ್ಲಿ ಮಿಂಚಿದ ಸುನಿಲ್ ನರೈನ್ `ಮ್ಯಾನ್ ಅಫ್ ದಿ ಮ್ಯಾಚ್’ ಪ್ರಶಸ್ತಿಗೆ ಪಾತ್ರರಾದರು.