ಮಾನವ ದೇಹವನ್ನು ಆತ್ಮದಿಂದ `ಪ್ರತ್ಯೇಕಿಸುವ ಪ್ರಯೋಗ’ವಂತೆ !

ಕುಟುಂಬದ ನಾಲ್ವರ ಹತ್ಯೆ ಪ್ರಕರಣ

ಕಾಸರಗೋಡು : ತನ್ನ ತಂದೆ, ತಾಯಿ, ಸಹೋದರಿ ಮತ್ತು ಸಂಬಂಧಿ ಮಹಿಳೆಯೊಬ್ಬರನ್ನು ದಾರುಣವಾಗಿ ಹತ್ಯೆಗೈದ ಆರೋಪದ ಮೇಲೆ ಬಂಧಿತನಾಗಿರುವ ಕ್ಯಾಡೆಲ್ ಜೀನ್ಸನ್ ರಾಜಾ ಪೊಲೀಸ್ ವಿಚಾರಣೆಯ ವೇಳೆ ತಾನು  ಮಾನವ ದೇಹಗಳಿಂದ ಆತ್ಮವನ್ನು ಪ್ರತ್ಯೇಕಿಸುವ ಪ್ರಯೋಗದಂಗವಾಗಿ  ಈ ಅಪರಾಧಗೈದಿದ್ದೇನೆಂದು  ಹೇಳಿ ಎಲ್ಲರನ್ನೂ ದಂಗಾಗಿಸಿದ್ದಾನೆ. ಆತನ ಈ ಹೇಳಿಕೆಯ ನಂತರ  ಮಾನಸಿಕ ತಜ್ಞರನ್ನು ಕರೆಸಿದ ಪೊಲೀಸರು ಆರೋಪಿ ಬೈಪೋಲಾರ್ ಡಿಸಾರ್ಡರ್ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಕಂಡುಕೊಂಡಿದ್ದಾರೆ.

ಘಟನೆ ಕಳೆದ ವಾರ ತಿರುವನಂತಪುರಂನಲ್ಲಿ ಬೆಳಕಿಗೆ ಬಂದಿದ್ದು  ರಾಜಾ ಥಂಕಂ (60), ಡಾ ಜೀನ್ ಪದ್ಮ (58) ಹಾಗೂ ಅವರ ಪುತ್ರಿ ಕ್ಯಾರೊಲ್ (25) ಅವರ ಸುಟ್ಟ ದೇಹಗಳು ಮನೆಯಲ್ಲಿ ಪತ್ತೆಯಾಗಿದ್ದವು. ಆರೋಪಿ ಅವರನ್ನು ಕೊಲ್ಲುವ ಮುನ್ನ ಅವರಿಗೆ ವಿಷಮಿಶ್ರಿತ ಆಹಾರ ನೀಡಿದ್ದನೆಂದು ತಿಳಿದು ಬಂದಿತ್ತು.

ಈ ಘಟನೆಯ ನಂತರ ಸಂಬಂಧಿ, ಅಂಧೆಯಾಗಿದ್ದ 70 ವರ್ಷದ ಅನಿತಾ ಜೇನ್ ಎಂಬವರನ್ನೂ ಕಡಿದು ಕೊಲೆಗೈದಿದ್ದಾನೆಂದು ಆರೋಪಿಸಲಾಗಿದೆ.