ಇಬ್ಬರು ಮಹಿಳೆಯರ ಕಿಡ್ನಿ ಅದಲು ಬದಲುಗೊಳಿಸಿ ಗಂಡಂದಿರಿಗೆ ಕಸಿ

ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಅತ್ಯಂತ ಅಪರೂಪದ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯೊಂದು ಡಿ 19ರಂದು ದೇರಳಕಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಇಬ್ಬರು ರೋಗಿಗಳು ಚೇತರಿಸಿಕೊಂಡಿದ್ದು, ಜನವರಿ 11 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಬ್ಬರೂ ಕಾಯಿಲೆಯ ಅಂತಿಮ ಹಂತದಲ್ಲಿರುವಾಗ ಅವರ ಪತ್ನಿಯರು ತಮ್ಮ ಗಂಡಂದಿರಿಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದರು. ಆದರೆ ಇದಕ್ಕೆ ಅಡ್ಡಿಯಾಗಿದ್ದು ಅವರ ರಕ್ತದ ಗುಂಪು. ಗಂಡಂದಿರ ರಕ್ತದ ಗುಂಪಿಗೆ ಹೆಂಡತಿಯರ ರಕ್ತದ ಗುಂಪು ಹೊಂದಾಣಿಕೆಯಾಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಕಿಡ್ನಿ ಅದಲು ಬದಲುಗೊಳಿಸಿ ಗಂಡಂದಿರಿಗೆ ಕಿಡ್ನಿ ದಾನ ಮಾಡುವಂತೆ ಮೂತ್ರಪಿಂಡ ಶಾಸ್ತ್ರಜ್ಞ ಡಾ ಜನಾರ್ಧನ ಕಾಮತ್ ಮಹಿಳೆಯರಿಗೆ ಸಲಹೆ ನೀಡಿದ್ದರು.
ಡಾ ಅರುಣ್ ಮೆನನ್, ಸೂರಜ್ ಹೆಗ್ಡೆ ಮತ್ತು ಅಭಿಷೇಕ್ ಭಟ್ ಇವರನ್ನೊಳಗೊಂಡ ಡಾ ರಾಜೀವ್ ನೇತೃತ್ವದ ತಂಡ ಏಕಕಾಲದಲ್ಲಿ ನಾಲ್ಕು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿ ಯಶಸ್ವಿಯಾಗಿ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದೆ. ನಾಲ್ಕು ಮಂದಿಯೂ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಮೂತ್ರಪಿಂಡದ ಕಾಯಿಲೆಯಿಂದ ಅಂತಿಮ ಹಂತಕ್ಕೆ ತಲುಪಿದ್ದ ರೋಗಿಗಳಿಗೆ ಕಿಡ್ನಿ ಕಸಿ ಮಾಡುವುದು ಮಾತ್ರ ಅವರ ಜೀವವನ್ನು ಕಾಪಾಡಲು ಉಳಿದಿರುವ ದಾರಿ. ಜನರಿಂದ ಕಿಡ್ನಿ ದಾನವಾಗುತ್ತಿದ್ದಂತೆ ಅದಕ್ಕಾಗಿ ಕಾಯುತ್ತಿರುವ ರೋಗಿಗಳಿಗೆ ಕಿಡ್ನಿ ಕಸಿ ಮಾಡಲಾಗುತ್ತದೆ. ಆದರೂ ಕಿಡ್ನಿಯ ಕೊರತೆ ಎದುರಾಗಿದೆ. ಭಾರತದಲ್ಲಿ ಅಂಕಿಅಂಶಗಳ ಪ್ರಕಾರ 1.5 ಲಕ್ಷ ಜನರು ಕಿಡ್ನಿಗಾಗಿ ಕಾಯುತ್ತಿದ್ದಾರೆ, ಇವರಲ್ಲಿ ಕೇವಲ 30 ರಲ್ಲಿ ಒಬ್ಬನಿಗೆ ಮಾತ್ರ ಕಿಡ್ನಿ ದಾನಿ ದೊರೆಯುತ್ತಾರೆ. ಅನೇಕ ರೋಗಿಗಳು ಜೀವನ ಪರ್ಯಂತ ಡಯಾಲಿಸಿಸ್‍ನಲ್ಲಿ ಜೀವನ ಕಳೆಯುತ್ತಾರೆ. ಹಲವಾರು ಕಾರಣಗಳಿಂದ ದಾನಿಗಳು ದೊರೆಯುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಅದಲುಬದಲು ಕಸಿ ಚಿಕಿತ್ಸೆ ಪ್ರಕ್ರಿಯೆ ಕಿಡ್ನಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯವಾಗಬಹುದು ಎಂದು ಡಾ ರಾಜೀವ್ ಹೇಳಿದ್ದಾರೆ.