ಖುರೇಷಿ ವೆನ್ಲಾಕಿನಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್

ಆಯುಕ್ತ ಚಂದ್ರಶೇಖರ್

ಮಂಗಳೂರು : ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ, ಪೊಲೀಸರು ನಡೆಸಿದ ಹಲ್ಲೆಯಿಂದಾಗಿ ಕಿಡ್ನಿ ಕಳೆದುಕೊಂಡಿದ್ದಾನೆ ಎನ್ನಲಾಗಿರುವ ಅಹ್ಮದ್ ಖುರೇಷಿಯನ್ನು ಇದೀಗ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಮಂಗಳೂರಿನ ಎರಡನೇ ಜೆಎಂಎಫ್‍ಸಿ ನ್ಯಾಯಾಲಯವು ಗುರುವಾರ ಬೆಳಿಗ್ಗೆ ಆದೇಶಿಸಿದ್ದು, ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಅಪರಾಹ್ನದ ವೇಳೆಗೆ ಖುರೇಷಿಯನ್ನು ವೆನ್ಲಾಕಿನಿಂದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಇದೀಗ ಆತನನ್ನು ದಾಖಲಿಸಲಾಗಿರುವ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯಗಳು ಇಲ್ಲದಿರುವ ಕಾರಣ ಹಾಗೂ ಸಂಬಂಧಿಸಿದ ಚಿಕಿತ್ಸೆ ನೀಡಲು ತಜ್ಞ ವೈದ್ಯರೂ ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಖುರೇಷಿ ಪರ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶ ಕುಂದರ್ ಅವರು, ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವಂತೆ ಆದೇಶ ನೀಡಿದ್ದಾರೆ.  ಪ್ರಕರಣದ ತನಿಖಾಧಿಕಾರಿಯವರು ಖುರೇಷಿಯ ಭದ್ರತೆಯ ಬಗ್ಗೆ ಖಾತ್ರಿ ಪಡಿಸಬೇಕು. ಖುರೇಷಿಯವರ ಆರೋಗ್ಯದ ಬಗ್ಗೆ ಸಂದರ್ಭಾನುಸಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.