ಗಲಭೆಗೆ ಪ್ರಭಾಕರ್ ಭಟ್ ಕಾರಣ : ಖಾದರ್ ಆರೋಪ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಲ್ಲಡ್ಕದಲ್ಲಿ ಮತ್ತೆ ಭುಗಿಲೆದ್ದಿರುವ ಅಹಿತಕರ ಘಟನೆ, ಗಲಭೆಗಳಿಗೆ ಆರೆಸ್ಸೆಸ್ ಮುಖಂಡ ಕಲ್ಕಡ್ಕ ಪ್ರಭಾಕರ್ ಭಟ್ ನೇರ ಕಾರಣ ಎಂದು ಆಹಾರ ಖಾತೆ ಸಚಿವ ಯು ಟಿ ಖಾದರ್ ಆರೋಪಿಸಿದ್ದಾರೆ.

ಕೋಮು ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಹಾಗೂ ಕೋಮು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿರುವ ಮೂಲಕ ಪ್ರಭಾಕರ್ ಭಟ್ ಕಲ್ಲಡ್ಕದಲ್ಲಿ ಪದೇ ಪದೇ ಶಾಂತಿ ಕದಡಲು ಕಾರಣರಾಗುತ್ತಿದ್ದಾರೆ.

ಇದರ ಆಧಾರದಲ್ಲೇ ಕಲ್ಲಡ್ಕದ ಅಹಿತಕರ ಘಟನೆಗಳ ತನಿಖೆಯನ್ನು ನಡೆಸಲು ಪೊಲೀಸರಿಗೆ ರಾಜ್ಯ ಗೃಹ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿರುವುದಾಗಿ ಅವರು ಹೇಳಿದರು. ಯಾವುದೇ ವದಂತಿಗೆ ಕಿವಿಗೊಡಬೇಡಿರಿ. ಶಾಂತಿಭಂಗ ಉಂಟುಮಾಡದೇ ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.


ನಲುಗಿದ ಕಲ್ಲಡ್ಕ

ಮೇ 26 ರಂದು ಹಾಡಹಗಲೇ ಕಲ್ಲಡ್ಕದಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ಬಂಧನ ಇದುವರೆಗೂ ಆಗಿಲ್ಲ. ಘಟನೆಯ ಸತ್ಯಾಸತ್ಯತೆ ಪೊಲೀಸರಿಗೆ ಚೆನ್ನಾಗಿ ತಿಳಿದಿದ್ದರೂ ಬಳಿಕ ಸಂಘ ಪರಿವಾರದ ಪ್ರಮುಖರು ಸುದ್ದಿಗೋಷ್ಠ ನಡೆಸಿ ಪೊಲೀಸರ ಮೇಲೆಯೇ ವೃಥಾ ಆರೋಪ ನಡೆಸುವ ಮೂಲಕ ಪ್ರಕರಣ ತಿರುಚುವ ಪ್ರಯತ್ನ ನಡೆಸಿದ್ದರು. ಆರೋಪಿಗಳನ್ನು ತಕ್ಷಣ ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದ ಪೊಲೀಸರು ಇದುವರೆಗೂ ಯಾವುದೇ ಬೆಳವಣಿಗೆ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು. ಸ್ವತಃ ಜಿಲ್ಲಾ ಎಸ್ಪಿ ಅವರೇ ವಿಶೇಷ

ಮುತುವರ್ಜಿ ವಹಿಸಿದ್ದರೂ  ಆರೋಪಿಗಳ ಜಾಡು ಬೇಧಿಸಲು ಸಾಧ್ಯವಾಗಿಲ್ಲ. ಇದುವೇ ಮತ್ತೆ ದುಷ್ಕರ್ಮಿಗಳು ಪೊಲೀಸರ ಸಮ್ಮುಖದಲ್ಲೇ ಅಟ್ಟಹಾಸ ಮೆರೆಯಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿ ಹೊರತುಪಡಿಸಿ ಜಿಲ್ಲೆಯ ಬಂಟ್ವಾಳ ಸಹಿತ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಜೂ 14 ರ ಮಧ್ಯರಾತ್ರಿವರೆಗೆ ಸೆಕ್ಷನ್ 144 ಕಲಂನಡಿ ನಿಷೇಧಾಜ್ಞೆ ವಿಧಿಸಿ ದ ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ದಂಡಾಧಿಕಾರಿ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.