ರೈಗೆ ಖಾದರ್, ಅಭಯ ಸಾಥ್

 ಪ್ರಭಾಕರ ಭಟ್ಟರನ್ನು ಬಂಧಿಸಲು ಹೇಳಿದ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಾತನಾಡಿದ ಎಲ್ಲಾ ವಿಚಾರಗಳೂ ಸತ್ಯಾಂಶದಿಂದಲೇ ಕೂಡಿದ್ದು, ರೈಗಳು ಯಾವುದೇ ಆಧಾರವಿಲ್ಲದೇ ಮಾತನಾಡುವುದಿಲ್ಲ. ಬಿಜೆಪಿ, ಸಂಘ ಪರಿವಾರದ ಯಾವುದೇ ಬೆದರಿಕೆಗಳಿಗೂ ಅವರು ಜಗ್ಗುವುದಿಲ್ಲ ಎಂದು ಆಹಾರ ಖಾತೆ ಸಚಿವ ಯು ಟಿ ಖಾದರ್ ಹೇಳಿದರು.

ಕಲ್ಲಡ್ಕ ಕೋಮುಗಲಭೆ ಸಂಬಂಧಿಸಿದಂತೆ ರೈಗಳು ಜಿಲ್ಲಾ ಎಸ್ಪಿ ಗುಲಾಬರಾವ್ ಬೊರಸೆ ಅವರನ್ನು ಕರೆಸಿಕೊಂಡು ಪ್ರಭಾಕರ ಭಟ್ಟರನ್ನು ಬಂಧಿಸುವಂತೆ ಹೇಳಿದ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿದೆ.

ಈ ವಿಚಾರ ವಿಧಾನಸಭೆಯಲ್ಲೂ ತೀವ್ರ ಕೋಲಾಹಲಕ್ಕೆ ಕಾರಣವಾಗಿ ರೈಗಳನ್ನು ಸಚಿವ ಖಾದರ್ ಮತ್ತು ಶಾಸಕ ಅಭಯಚಂದ್ರ ಜೈನ್ ಬೆಂಬಲಿಸಿದರು.

“ಉಸ್ತುವಾರಿ ಸಚಿವರಿಗೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕೆಲವರು ಕಾನೂನು ಸುವ್ಯವಸ್ಥೆಯನ್ನು ಕೆಡಿಸುತ್ತಿದ್ದು, ಸಮುದಾಯದ ನಡುವೆ ದ್ವೇಷ ಹುಟ್ಟುಹಾಕುತ್ತಿದ್ದಾರೆ” ಎಂದು ಖಾದರ್ ಹೇಳಿದರು.

ಶಾಸಕ ಅಭಯಚಂದ್ರ ಮಾತನಾಡಿ, “ಸಚಿವರು ಸರಿಯಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಪರಿಸ್ಥಿತಿಯ ಅವಲೋಕನ ಮಾಡಿ ಮಾತನಾಡಿದ್ದಾರೆ. ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಎಸ್ಪಿಯವರಿಗೆ ನಿರ್ದೇಶನ ನೀಡಿದ್ದಾರೆ. ಯಾರನ್ನೂ ಟಾರ್ಗೆಟ್ ಮಾಡುವ, ಓಲೈಕೆ ಮಾಡುವ ಉದ್ದೇಶ ಅವರಿಗೆ ಇಲ್ಲ” ಎಂದರು.

ಇದೇ ವೇಳೆ ಸಚಿವ ರೈ ಸದನಕ್ಕೆ ಬಂದಾಗ ಬಿಜೆಪಿಯ ಸುನಿಲಕುಮಾರ್, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೋದಲ್ಲಿ ಕೊಟ್ಟ ಹೇಳಿಕೆಗೆ ಸ್ಪಷ್ಟನೆ ಬಯಸಿದರು. ಪಟ್ಟು ಬಿಡದ ಬಿಜೆಪಿ ಸದಸ್ಯರು ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.