ಕೆ ಜಿ ಹಳ್ಳಿ ಲೈಂಗಿಕ ಕಿರುಕುಳ ಪ್ರಕರಣ : ಉಲ್ಟಾ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ

ಬೆಂಗಳೂರು : ಹಿಜಬ್ ಧರಿಸಿದ್ದ ಯುವತಿಯೊಬ್ಬಳ ಮೇಲೆ ಕೆ ಜಿ ಹಳ್ಳಿಯಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಮುಂದುವರಿದಿರುವಂತೆಯೇ ಸಂತ್ರಸ್ತೆ ಪರಸ್ಪರ ವಿರೋಧದ ಹೇಳಿಕೆ ನೀಡುತ್ತಿರುವುದು ಪೊಲೀಸರಿಗೆ ತಲೆನೋವು ತಂದಿದೆ. ಇದೊಂದು ದರೋಡೆ ಯತ್ನ ಪ್ರಕರಣವಾಗಿರಬಹುದಲ್ಲದೆ ಲೈಂಗಿಕ ಕಿರುಕುಳ ಪ್ರಕರಣವಾಗಿರಲಿಕ್ಕಿಲ್ಲ ಎಂದು ಪೊಲೀಸರು ಇದೀಗ ಶಂಕಿಸುತ್ತಿದ್ದಾರೆ.

ಆರೋಪಿ ತನಗೆ ಕಿರುಕುಳ ನೀಡಲು ಯತ್ನಿಸಿದ್ದ ಎಂದು ಮೊದಲು ಹೇಳಿದ್ದ ಯುವತಿ ತನ್ನ ಹೇಳಿಕೆ ಬದಲಾಯಿಸಿದ ಕಾರಣ ಅವರಿಬ್ಬರಿಗೂ ಮೊದಲೇ ಪರಿಚಯವಿತ್ತೇ ಎಂಬ ಸಂಶಯ ಮೂಡಲು ಕಾರಣವಾಗಿದೆಯೆನ್ನಲಾಗಿದ್ದು ಯುವತಿಯ ಮೊಬೈಲ್ ಕರೆ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಘಟನೆ ನಡೆದ ಬಳಿಕ ಆರೋಪಿ ಯಾವುದೇ ಅವಸರವಿಲ್ಲದೆ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತಿರುವುದೂ  ಹಲವು ಶಂಕೆಗಳಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಆಕೆಯ ಬ್ಯಾಗ್ ಸೆಳೆಯಲು ಯತ್ನಿಸಿದಾಗ ಆಕೆ ಬೊಬ್ಬೆ ಹೊಡೆದಿರುವುದರಿಂದ ಆತ ತನ್ನ ಕೈಯ್ಯಿಂದ ಆಕೆಯ ಬಾಯ್ಮುಚ್ಚಿಸಿರುವ ಸಾಧ್ಯತೆಯೂ ಇದೆಯೆಂದು ಇನ್ನೊಬ್ಬ ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರಲ್ಲದೆ ಈ ಸಂದರ್ಭ ಯುವತಿ ಬಿದ್ದು ಆಕೆಗೆ ಗಾಯಗಳಾಗಿರಬಹುದು ಎಂದಿದ್ದಾರೆ. ಪ್ರಕರಣದ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ.