ಮೀನು ಉತ್ಪನ್ನ ಉತ್ತೇಜನದಲ್ಲಿ ಅಂಗನವಾಡಿಗರ ಪಾಲುದಾರಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೌಲ್ಯಾಧರಿತ ಮೀನು ಮತ್ತು ಮೀನಿನ ಉತ್ಪನ್ನಗಳು ಕಳೆದ ನಾಲ್ಕು ವರ್ಷಗಳಲ್ಲಿ ವಾರ್ಷಿಕ ಮಾರಾಟವನ್ನು ರೂ 5 ಕೋಟಿಯಿಂದ 12 ಕೋಟಿಗೆ ಹೆಚ್ಚಿಸಿಕೊಂಡಿರುವುದರಿಂದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತವು ಸಮಾನ ಮನೋಭಾವದ ಏಜೆನ್ಸಿಗಳ ಸಹಾಯ ಮತ್ತು ಹೆಚ್ಚು ಜನರ ಭಾಗವಹಿಸುವಿಕೆಯೊಂದಿಗೆ ಮಾರುಕಟ್ಟೆಯ ಅಭಿವೃದ್ಧಿಗೆ ನಿರ್ಧರಿಸಿದೆ.

ಈ ಉದ್ದೇಶದಿಂದ ಕರ್ನಾಟಕ ಕೃಷಿ ವಿಜ್ಞಾನ ಕೇಂದ್ರ, ಬೀದರ್ ಪಶು, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ಯುನಿವರ್ಸಿಟಿ, ಹೈದ್ರಾಬಾದ್ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ದಕ್ಷಿಣ ಕನ್ನಡ ಮೀನುಗಾರಿಕಾ ಇಲಾಖೆ ಆಶ್ರಯದಲ್ಲಿ ಬುಧವಾರ ಮೀನು ಉತ್ಪನ್ನಗಳ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ನಗರದ ಫಿಶರೀಸ್ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳ ಮೂಲ ಉದ್ದೇಶ ಮೀನು ಬಳಕೆ ಮತ್ತು ಮೀನು ಉತ್ಪನ್ನವನ್ನು ಉತ್ತೇಜಿಸುವುದಾಗಿದೆ.

ಇದೇ ವೇಳೆ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ವಿಸ್ತರಣಾ ಅಧಿಕಾರಿ ಎಸ್ ಎಂ ಶಿವಪ್ರಕಾಶ್ ಅಧಿಕ ಪ್ರೊಟೀನ್ ಹೊಂದಿರುವ ಮೀನು ಸೇವನೆಯಿಂದ ದೇಹ ಮತ್ತು ಆರೋಗ್ಯದ ಮೇಲೆ ಉಂಟಾಗುವ ಲಾಭಗಳ ಬಗ್ಗೆ ವಿವರಿಸಿದರು.

ಸೂಪರ್ ಮಾರುಕಟ್ಟೆ

ಮೌಲ್ಯಾಧರಿತ ಮೀನು ಮತ್ತು ಮೀನು ಉತ್ಪನ್ನಗಳು ಸೂಪರ್ ಮಾರುಕಟ್ಟೆ ರೀತಿಯಲ್ಲಿ ಬೆಳೆಯುತ್ತಿರುವಾಗ ಉತ್ಪಾದನಾ ಸಾಮಥ್ರ್ಯಗಳನ್ನು ಹೆಚ್ಚಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ ಕೆ ಶೆಟ್ಟಿ ಹೇಳಿದರು.

“ತರಬೇತಿಯಲ್ಲಿ ಈ ಬಾರಿ 20 ಮಂದಿ ಅಂಗನವಾಡಿ ಕಾರ್ಯಕರ್ತರು, 10 ಮಂದಿ ರೋಶನಿ ನಿಲಯದ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಮತ್ತು ಇತರರು ಹೀಗೆ ಒಟ್ಟು 48 ಮಂದಿ ಭಾಗವಹಿಸುತ್ತಿದ್ದಾರೆ” ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಕುಮಾರ್ ಮಗದ ಹೇಳಿದರು.