ಅಫ್ಘಾನಿಸ್ತಾನದಲ್ಲಿ ಕಠಿಣ ಜೀವನ ಅನುಭವಿಸುತ್ತಿರುವ ಕೇರಳದಿಂದ ನಾಪತ್ತೆಯಾದ ಮುಸ್ಲಿಂ ಕುಟುಂಬಗಳು

ಗುಪ್ತಚರ ಅಧಿಕಾರಿಯೊಬ್ಬರ ಪ್ರಕಾರ ಅವರೆಲ್ಲರೂ ಅಲ್ಲಿ ಕೇರಳ ಹಾಗೂ ಭಾರತದ ವಿವಿಧೆಡೆಗಳಿಂದ ಬರುವ ಭವಿಷ್ಯದ ಜಿಹಾದಿಗಳನ್ನು ತಯಾರಿಸುವ ಉದ್ದೇಶದಿಂದ ತಮ್ಮದೇ ಸಮುದಾಯವೊಂದನ್ನು ನಿರ್ಮಿಸಿದ್ದಾರೆ

ಕೇರಳದಿಂದ ಕಳೆದ ವರ್ಷ ನಾಪತ್ತೆಯಾಗಿ ದೂರದ ಅಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸೇರಿದ್ದಾರೆನ್ನಲಾದ ವೈದ್ಯ ಇಜಾಝ್ ಕೆಟ್ಟಿಯಪುರಯ್ಯಿಲ್, ಆತನ ಪತ್ನಿ, ಸಹೋದರ  ಶಿಹಾಝ್ ಮತ್ತಾತನ  ಹೆಂಡತಿ ಹಾಗೂ ಇತರ 18 ಮಂದಿಯ ಬಗ್ಗೆ ತನಿಖೆ ಮುಂದುವರಿಯುತ್ತಿದ್ದಂತೆಯೇ ಇವರೆಲ್ಲ ಕೇರಳದಲ್ಲಿನ ತಮ್ಮ ಕುಟುಂಬ ಸದಸ್ಯರಿಗೆ ಕಳುಹಿಸಿದ ಸಂದೇಶಗಳಿಂದ ಅವರೆಲ್ಲರೂ ಅಲ್ಲಿ ಕಠಿಣ ಹಾಗೂ ವಿಚಿತ್ರ ಜೀವನ ಪದ್ಧತಿಯನ್ನು ಅನುಸರಿಸುತ್ತಿದ್ದಾರೆಂದು ತಿಳಿದುಬರುತ್ತಿದೆ.

ಅವರೆಲ್ಲರೂ  ಅಫ್ಘಾನಿಸ್ತಾನದ ನಂಗರ್ ಹರ್ ಪ್ರಾಂತ್ಯದಲ್ಲಿ  ತಮ್ಮದೇ ಒಂದು ಸಮುದಾಯವನ್ನು ನಿರ್ಮಿಸಿಕೊಂಡು ಅಂಗಡಿಗಳನ್ನು  ನಡೆಸುತ್ತಿದ್ದಾರೆ, ಧರ್ಮ ಪ್ರಚಾರ ಮಾಡುತ್ತಿದ್ದಾರೆ, ಮದುವೆಯಾಗಿದ್ದಾರೆ ಹಾಗೂ ಮಕ್ಕಳನ್ನೂ ಪಡೆದಿದ್ದಾರೆ. ಆದರೆ ಯಾರು ಕೂಡ ಉಗ್ರವಾದ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲವೆಂದು ಹೇಳಲಾಗುತ್ತಿದೆ.

ಗುಪ್ತಚರ ಅಧಿಕಾರಿಯೊಬ್ಬರ ಪ್ರಕಾರ ಅವರೆಲ್ಲರೂ ಅಲ್ಲಿ ಕೇರಳ ಹಾಗೂ ಭಾರತದ ವಿವಿಧೆಡೆಗಳಿಂದ ಬರುವ ಭವಿಷ್ಯದ ಜಿಹಾದಿಗಳನ್ನು ತಯಾರಿಸುವ ಉದ್ದೇಶದಿಂದ ತಮ್ಮದೇ ಸಮುದಾಯವೊಂದನ್ನು ನಿರ್ಮಿಸಿದ್ದಾರೆ. “ಅದು ಅವರ ನರ್ಸರಿಯಿದ್ದಂತೆ” ಎಂದು ಅವರು ಬಣ್ಣಿಸುತ್ತಾರೆ.

ಅಧಿಕಾರಿಗಳ ಅಂದಾಜಿನಂತೆ ಕೇರಳದಿಂದ ನಾಪತ್ತೆಯಾಗಿರುವ ಮಂದಿ ಅಫ್ಘಾನಿಸ್ತಾನದಲ್ಲಿ ಪರ್ವತದಿಂದಾವೃತವಾದ ಹಾಗೂ ಸರಿಯಾದ ರಸ್ತೆ ಸಂಪರ್ಕಗಳಿಲ್ಲದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಇಜಾಝ್ ಹಾಗೂ ಶಿಹಾಝ್ ಅಲ್ಲಿ ಒಂದು ಸಣ್ಣ ಮನೆಯಲ್ಲಿ ತಮ್ಮ ಕುಟುಂಬಗಳೊಂದಿಗೆ ವಾಸವಾಗಿದ್ದಾರೆ. ಅಲ್ಲಿ ಆರಾಮದಾಯಕ ಜೀವನಕ್ಕೆ ಅಗತ್ಯವಾದ ಯಾವ ಸೌಕರ್ಯಗಳಿಲ್ಲದೇ ಇದ್ದರೂ ತಾವು ಸ್ವರ್ಗದಲ್ಲಿದ್ದೇವೆ ಮತ್ತೆ ಹಿಂದಿರುಗಿ ಬರುವುದಿಲ್ಲವೆಂದು ತಮ್ಮ ಕುಟುಂಬದ ಸದಸ್ಯರಿಗೆ ಹೇಳಿದ್ದಾರೆ.

ವೈದ್ಯನಾಗಿರುವ ಇಜಾಝ್ ಅಲ್ಲಿ ಕ್ಲಿನಿಕ್ ಒಂದನ್ನು ನಡೆಸುತ್ತಿದ್ದರೆ ಇಂಜಿನಿಯರ್ ಆಗಿರುವ ಶಿಹಾಝ್  ಶಿಕ್ಷಕನಾಗಿದ್ದಾನೆ. ಅಲ್ಲಿ ಅವರು ದುರ್ಗಮ ಪ್ರದೇಶಗಳಲ್ಲಿರುವುದರಿಂದ ಭಾರತದಲ್ಲಿರುವ ತಮ್ಮ ಕುಟುಂಬಕ್ಕೆ ದೂರವಾಣಿ ಕರೆ ಮಾಡಬೇಕಾದರೂ ಬಹಳ ದೂರ ಸಾಗಬೇಕೆಂದು ತಿಳಿದು ಬಂದಿದೆ. ಇಜಾಝ್ ಹಾಗೂ ಶಿಹಾಝ್ ಸಹೋದರರ ತಂದೆ ಅಬ್ದುಲ್ ರೆಹಮಾನ್ ಪ್ರಕಾರ ಅವರ ಪುತ್ರರು ಕಾಸರಗೋಡಿನ ಹಲವರ ಜತೆ ಈಗಲೂ ಸಂಪರ್ಕದಲ್ಲಿದ್ದಾರೆ. “ನಾವು ನೈಜ ಇಸ್ಲಾಮಿಕ್ ಜೀವನ ನಡೆಸುತ್ತಿದ್ದೇವೆ” ಎಂದು ಅವರು ಹೇಳುತ್ತಾರೆಂದು ರೆಹಮಾನ್ ತಿಳಿಸುತ್ತಾರೆ.

ಕೇರಳದಲ್ಲಿ ಇಸ್ಲಾಮಿಸ್ಟ್ ಜಾಲ ಸಕ್ರಿಯವಾಗಿದೆಯೆಂಬುದನ್ನು ಅಲ್ಲಿನ ಪೊಲೀಸ್ ಹಾಗೂ ಗುಪ್ತಚರ ಅಧಿಕಾರಿಗಳು ಒಪ್ಪುತ್ತಾರಲ್ಲದೆ ಮುಂದಿನ ಹಂತದಲ್ಲಿ ಅವರು  ಮಿಲಿಟರಿ ತರಬೇತಿಗಾಗಿಯೆಂದೇ ಸ್ವಯಂ ಸೇವಕರ ನೇಮಕಾತಿ ಮಾಡುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ. ಅವರ ಈ ಸಂಶಯ ಆಧಾರರಹಿತವೇನಲ್ಲ. ಕಳೆದ ಆರು ತಿಂಗಳುಗಳಿಂದ ಈ ಜಾಲ ನಡೆಸುವ ಎನ್ಕ್ರಿಪ್ಟೆಡ್ ಚ್ಯಾಟ್ ವೇದಿಕೆ `ಟೆಲಿಗ್ರಾಂ’ ಮೂಲಕ  ಜಿಹಾದಿ ನಾಯಕರ ಸಾಕಷ್ಟು ಉದ್ಘೋಷಗಳನ್ನು ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಲಭ್ಯವಾಗಿದೆ.