ದನದ ಕೊಂಬು ವಿಕಿರಣ ಹೀರಬಹುದಂತೆ, ಸೆಗಣಿಯಲ್ಲಿದೆಯಂತೆ ಪ್ಲುಟೋನಿಯಂ !

ಈ ದೇಶದಲ್ಲಿ ಭಾರೀ ಮಹತ್ವ ಪಡೆಯುತ್ತಿರುವ ಜೀವಿಯೇನಾದರೂ ಇದ್ದರೆ ಅದು ಗೋವು ಎಂಬುದು ನಿರ್ವಿವಾದಿತ. ಕೇಂದ್ರ ಸರಕಾರ ಕೂಡ ಗೋರಕ್ಷಣೆಯ ಮಂತ್ರ ಪಠಿಸುತ್ತಿದೆ. ಇದು ಸಾಲದೆಂಬಂತೆ ಗೋವಿನ ವೈಜ್ಞಾನಿಕ ಮಹತ್ವ ವಿವರಿಸುವವರೂ ಹಲವರಿದ್ದಾರೆ.

ಈ ಪಟ್ಟಿಗೆ ಇತ್ತೀಚಿಗಿನ ಸೇರ್ಪಡೆ  ಕೇರಳದ ಆಧ್ಯಾತ್ಮಿಕ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿರುವ ಭಾಗವತಂ ಗ್ರಾಮದ ಸಂಸ್ಥಾಪಕ ಸ್ವಾಮಿ ಉದಿತ್ ಚೈತನ್ಯ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಈ ಸ್ವಾಮಿ ಗೋವಿನ ಮಹತ್ವವನ್ನು ವಿವರಿಸಲು ಕೆಲವೊಂದು ಅಂಶಗಳತ್ತ ಬೊಟ್ಟು ಮಾಡಿದ್ದಾರೆ.

ಅವರ ಪ್ರಕಾರ ದನದ ಕೊಂಬುಗಳು ವಿಕಿರಣವನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ. ಅಷ್ಟೇ ಅಲ್ಲ, ಅವುಗಳು ಧ್ವನಿ ತರಂಗಗಳನ್ನು ನಿಯಂತ್ರಿಸಿ ವಾತಾವರಣದಿಂದ ಹಾನಿಕಾರಕ ಆಯಸ್ಕಾಂತೀಯ  ತರಂಗಗಳನ್ನೂ ತೆಗೆದು ಹಾಕಬಹುದಂತೆ. ಇದನ್ನು ಸಾಬೀತುಪಡಿಸಲು ಅವರು ಪ್ರಯೋಗವೊಂದನ್ನೂ ಸೂಚಿಸುತ್ತಾರೆ.

ದನದ ಸೆÀಗಣಿಯಲ್ಲಿ ಪ್ಲುಟೋನಿಯಂ ಇದೆ ಎಂದು ಹೇಳುವ ಸ್ವಾಮಿ,  ಅಣು ವಿದ್ಯುತ್ ಸ್ಥಾವರಗಳಿಗೆ ಪ್ಲುಟೋನಿಯಂ ಅಗತ್ಯವಾದರೂ ಸೆಗಣಿಯ ಮಹತ್ವವನ್ನು ಸರಕಾರ ಗುರುತಿಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ. ಗೋಮೂತ್ರ ಸೇವಿಸಿ ಯಾವುದೇ ಅಲೋಪತಿ ಔಷಧಿಯಿಲ್ಲದೆಯೇ ತನ್ನ ಅಸ್ತಮಾ ಸಮಸ್ಯೆಯನ್ನು ಗುಣಪಡಿಸಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ಗೋವಿನ ಹೊರತಾಗಿ ನಾಯಿ, ಕೋಳಿ, ಹಾವುಗಳ ಮಹತ್ವವನ್ನೂ ಈ ಸ್ವಾಮಿ ವಿವರಿಸುತ್ತಾ ಹೋಗುತ್ತಾರೆ.

ತನ್ನ ಧಾರ್ಮಿಕ ಉಪನ್ಯಾಸಗಳಿಗೆ ಖ್ಯಾತರಾಗಿರುವ ಸ್ವಾಮಿಯೊಬ್ಬರ ಈ ರೀತಿಯ ವೀಡಿಯೋ ಹಲವರಿಗೆ ಆಶ್ಚರ್ಯ ಹುಟ್ಟಿಸಿದೆ. ಸಂಜೀವನಿ ಎಂಬ ನಕಲಿ ಮಾಹಿತಿಗಳಿರುವ ಫೇಸ್ಬುಕ್ ಪುಟದಲ್ಲಿನ ಮಾಹಿತಿಗಳಿಂದ ಸ್ವಾಮಿ ಮೋಸ ಹೋಗಿರಬಹುದೆಂದು ಹೇಳಲಾಗುತ್ತಿದೆ. ತಾನು ಮೇ ತಿಂಗಳಲ್ಲಿ ಅಪ್ಲೋಡ್ ಮಾಡಿದ್ದ ವೀಡಿಯೋ ವೊಂದರಲ್ಲಿದ್ದ ಮಾಹಿತಿಗಳನ್ನು ಸ್ವಾಮಿ ಉದಿತ್  ನಕಲಿ ಮಾಡಿದ್ದಾರೆಂದು ಸಂಜೀವನಿ ಹೇಳಿಕೊಂಡಿದೆ.