ಲೇಖಕ ಚವರ ವಿರುದ್ಧ `ರಾಷ್ಟ್ರದ್ರೋಹ’ ಕೇಸು ಹಿಂತೆಗೆದ ಕೇರಳ ಸರಕಾರ

ವಿಶೇಷ ವರದಿ

ತಿರುವನಂತಪುರಂ : ಮಲಯಾಲಂ ಲೇಖಕ ಕಮಲ್ ಚವರ ಮತ್ತು ಕಾರ್ಯಕರ್ತ ಸಿ ನಾಯರ್ ವಿರುದ್ಧ ದಾಖಲಾಗಿರುವ ರಾಷ್ಟ್ರದ್ರೋಹ ಆರೋಪ ಪ್ರಕರಣ ಕೈಬಿಡುವಂತೆ ಕೇರಳ ಸೀಎಂ ಪಿಣರಾಯಿ ವಿಜಯನ್ ರಾಜ್ಯ ಪೊಲೀಸ್ ಮುಖ್ಯಸ್ಥಗೆ ನಿರ್ದೇಶಿಸಿದ್ದಾರೆ. ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದಲ್ಲಿ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆಡಳಿತ ಪಕ್ಷದ ಸಹಿತ ವಿಭಿನ್ನ ವಲಯದಿಂದ ಭಾರೀ ಟೀಕೆ ವ್ಯಕ್ತವಾಗಿತ್ತು.

ಫೇಸ್ಬುಕ್ಕಿನಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ರಾಷ್ಟ್ರದ್ರೋಹ ಆರೋಪದಡಿ ರಂಗಕರ್ಮಿಯೂ ಆಗಿರುವ ಚವರರನ್ನು ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ಬಿಜೆಪಿಯ ಭಾರತೀಯ ಯುವ ಮೋರ್ಚಾ ದೂರು ನೀಡಿತ್ತು.

“ಕೇರಳದ ಶಾಲೆಯೊಂದರ 44 ವಿದ್ಯಾರ್ಥಿಗಳು ರಾಜ್ಯದಲ್ಲಿ ಬರಿದಾಗಿರುವ 44 ನದಿಗಳನ್ನು ಹೆಸರಿಸಿದ್ದರು. ಆದರೆ ಶಿಕ್ಷಕರು ವಿದ್ಯಾರ್ಥಿಗಳ ಮನವಿಗೆ ಕಿವಿಗೊಡದೆ, ವಾಶ್‍ರೂಮಿಗೆ ಹೋಗಿದ್ದರು. ಪ್ರತಿದಿನ ಸಂಜೆ 4 ಗಂಟೆಗೆ ಶಾಲೆಯಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕಾಗುತ್ತಿತ್ತು. ಜನ ಗಣ ಮನಕ್ಕಿಂತಲೂ ನನಗೆ ಮೂತ್ರಶಂಕೆ ಮಾಡುವುದು ಮಹತ್ವದ್ದಾಗಿದ್ದು, ನಾನೊಬ್ಬ ಶಿಸ್ತಿನ ವಿದ್ಯಾರ್ಥಿ” ಎಂದು ಚವರ ಪೇಸ್ಬುಕ್ಕಿನಲ್ಲಿ ಬರೆದಿದ್ದರು.

ಜಾಮೀನು ಸಿಗುವವರೆಗೆ ಚವರ ಕೆಲವು ತಾಸು ಲಾಕಪ್ಪಿನಲ್ಲಿದ್ದರು. ಅವರ ರಕ್ಷಣೆಗೆಂದು ಮರುದಿನ ಆಸ್ಪತ್ರೆಗೆ ಬಂದಿದ್ದ ನಾಯರನನ್ನು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದರು.

ಮಾನವ ಹಕ್ಕುಗಳ ಚಳುವಳಿಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಇವರಿಬ್ಬರ ಬಂಧನ ಖಂಡಿಸಿದ್ದಾರೆ. ಪ್ರಶ್ನಿಸುವ ಮತ್ತು ವಿಚಾರವಾದ ಮಂಡಿಸುವವರ ವಿರುದ್ಧ ಅಸಹಿಷ್ಣುತೆ ಅಧಿಕಗೊಳ್ಳುತ್ತಿದೆ ಎಂದವರು ಆರೋಪಿಸಿದ್ದಾರೆ. ಭಾರತೀಯ ಯುವ ಮೋರ್ಚಾ ದೂರು ನೀಡಿದಾಕ್ಷಣ ವಿಚಾರ-ವಿಮರ್ಶೆ ಮಾಡದ ಪೊಲೀಸರು ವಿಚಾರವಾದಿಗಳಿಬ್ಬರ ವಿರುದ್ಧ ಕ್ರಮ ಜರುಗಿಸಿದ್ದಾರೆ.

ಪೊಲೀಸರ ಈ ದುಡುಕಿನ ಕ್ರಮವನ್ನು ಕಮ್ಯುನಿಸ್ಟ್ ಪಕ್ಷ ಮುಖಂಡ ಅಚ್ಯುತಾನಂದನ್ ಮತ್ತು ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಟೀಕಿಸಿದ್ದಾರೆ.

“ರಾಜಕೀಯ ಮತ್ತು ಸಾಮಾಜಿಕ ವಿಷಯ ಎತ್ತಿದವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಹೇರಬಾರದು. ಕೆಲವು ಪೊಲೀಸ್ ಅಧಿಕಾರಿಗಳು ನಿಯಮಗಳ ವಿರುದ್ಧ ಕೆಲಸ ಮಾಡುತ್ತಿದ್ದು, ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ಅಚ್ಚರಿಪಡಬೇಕಾಗಿಲ್ಲ” ಎಂದು ಬಾಲಕೃಷ್ಣನ್ ಟೀಕಿಸಿದರು.

ಪೊಲೀಸ್ ಕ್ರಮವನ್ನು ಆಡಳಿತ ಮೈತ್ರಿ ಪಕ್ಷವಾದ ಸಿಪಿಐ ಕೂಡಾ ಖಂಡಿಸಿದೆ.

“ಇಂತಹ ಬೆಳವಣಿಗೆಯಿಂದ ರಾಜ್ಯವು ಫ್ಯಾಸಿಸಂನತ್ತ ಸಾಗುತ್ತಿದೆ ಎಂಬ ಜನರ ನಂಬಿಕೆ ಹೆಚ್ಚು ಬಲಗೊಳ್ಳಲಿದೆ” ಎಂದು ಅಚ್ಯುತಾನಂದನ್ ಪೊಲೀಸರನ್ನು ಖಂಡಿಸಿದ್ದಾರೆ.

ಕೇರಳದಲ್ಲಿ ದಲಿತರು, ಕಲಾವಿದರು, ಲೇಖಕರು, ಆದಿವಾಸಿಗಳು ಮತ್ತು ಬಡವರು ಭೀತಿರಹಿತ ಜೀವಿಸಲು ಅವಕಾಶ ಕಲ್ಪಿಸಲಾಗಿದೆ ಎಂದ ಅಚ್ಯುತಾನಂದನ್, ಕರ್ನಾಟಕದಲ್ಲಿ ವಿಚಾರವಾದಿ ಕಲಬುರ್ಗಿ ಮತ್ತು ಮಹಾರಾಷ್ಟ್ರದಲ್ಲಿ ಗೋವಿಂದ ಪನ್ಸಾರೆಯಂತಹವರ ಕೊಲೆಗೈಯಲಾದ ಮೇಲಾದರೂ ವಿಚಾರವಾದಿಗಳ ರಕ್ಷಣೆ ಪೊಲೀಸರ ಕರ್ತವ್ಯವೆಂದು ತಿಳಿದುಕೊಳ್ಳಬೇಕು ಎಂದರು.

ಬಂಧನದ ವೇಳೆ ಚವರ, ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆಯಲು ಯೋಚಿಸಿದ್ದರು. ಈನಡುವೆ ಈ ತಿಂಗಳ ಆದಿಯಲ್ಲಿ ತಿರುವನಂತಪುರದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಾಷ್ಟ್ರಗೀತೆ ಹಾಡುವಾಗ ಎದ್ದುನಿಲ್ಲದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಎಲ್ಲ ಚಿತ್ರಮಂದಿರಗಳಲ್ಲಿ ಚಲನಚಿತ್ರ ಆರಂಭಕ್ಕೆ ಮುಂಚೆ ರಾಷ್ಟ್ರಗೀತೆ ಕೇಳಿಬರಬೇಕು ಮತ್ತು ಆ ವೇಳೆ ಎಲ್ಲರೂ ಎದ್ದುನಿಲ್ಲಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೆಲ್ಲ ಹಿಂದೂ ಗುಂಪುಗಳ ಕುತಂತ್ರ ಎಂಬ ಟೀಕೆಯೂ ಕೇಳಿ ಬಂದಿದೆ.