ಹಿಂದುಯೇತರರಿಗೆ ದೇವಾಲಯ ಪ್ರವೇಶಕ್ಕೆ ಕೇರಳ ದೇವಸ್ವಂ ಮಂಡಲಿ ಸದಸ್ಯ ಆಗ್ರಹ

ಇತ್ತೀಚಿನವರೆಗೂ ಕೇರಳದ ದೇವಾಲಯಗಳಲ್ಲಿ `ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ’ ಎಂಬ ಬೋರ್ಡ್ ಇರುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಬೋರ್ಡುಗಳನ್ನು ಯಾರೂ ಗಮನಿಸುವುದಿಲ್ಲವಾದರೂ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸುವ ಪದ್ಧತಿ ಜಾರಿಯಲ್ಲಿತ್ತು. ಈಗ ತ್ರವಂಕೂರ್ ದೇವಾಲಯ ಮಂಡಲಿಯ ಸದಸ್ಯ ಅಜಯ್ ತರಯಿಲ್ ಹಿಂದೂಯೇತರರಿಗೂ ದೇವಾಲಯ ಪ್ರವೇಶ ನೀಡುವಂತೆ ಆಗ್ರಹಿಸಿದ್ದಾರೆ. ದೇವಾಲಯ ಮಂಡಲಿಯ ನಿಯಮಗಳ ಅನುಸಾರ ಹಿಂದೂ ಧರ್ಮಕ್ಕೆ ಬದ್ಧರಾಗಿರುವುದಾಗಿ ಪ್ರಮಾಣ ಮಾಡಿದವರು ಮಾತ್ರ ಪ್ರವೇಶಕ್ಕೆ ಅರ್ಹರಾಗಿದ್ದರು. ಆದರೆ ಇತರ ಧರ್ಮಗಳ ಜನರೂ ಸಹ ದೇವಾಲಯಗಳಿಗೆ ಭೇಟಿ ನೀಡುವುದರಿಂದ 1952ರ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮಂಡಲಿಯ ಇತರ ಸದಸ್ಯರೂ ಬೆಂಬಲ ನೀಡಬೇಕು ಎಂದು ಅಜಯ್ ಆಗ್ರಹಿಸಿದ್ದಾರೆ.

ಆದರೆ ಈ ವಿಚಾರದಲ್ಲಿ ದೇವಾಲಯ ಮಂಡಲಿ ಒಂದೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ಮಂಡಲಿಯ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಹೇಳಿದ್ದಾರೆ. ದೇವಾಲಯದ ಅಧಿಕಾರ ವರ್ಗದೊಡನೆ ಮಾತುಕತೆ ನಡೆಸಿ ನಂತರ ಸಲಹಾ ಸಮಿತಿಯ ಆದೇಶವನ್ನು ಅನುಸರಿಸಬೇಕಾಗುತ್ತದೆ ಎನ್ನಲಾಗಿದೆ.

ಏತನ್ಮಧ್ಯೆ ದೇವಾಲಯಗಳ ಸಚಿವ ಕಡಕಂಪಲ್ಲಿ ಸುರೆಂದ್ರನ್ ಈ ಕುರಿತು ಪ್ರಸ್ತಾಪಿಸಿದ್ದು, ದೇವಲಗಳಲ್ಲಿ ಯಾರಿಗೂ ಪ್ರವೇಶ ನಿಷಿದ್ಧವಿಲ್ಲ ಎಂದು ಹೇಳಿದ್ದಾರೆ. ಕೆಲವು ಲಿಖಿತ ನಿಯಮಗಳು ಇರುವುದಾದರೂ ಯಾವುದೇ ದೇವಾಲಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ ಹಾಗಾಗಿ ಈ ಕುರಿತು ಯಾವುದೇ ಚರ್ಚೆ ಅಥವಾ ನಿರ್ಣಯ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.