ಮೇಲ್ಜಾತಿಯವರ ಶವಸಂಸ್ಕಾರಕ್ಕೆ ಕೇರಳದ ದಲಿತರ ಅಸಹಕಾರ

ಕಷ್ಟಕರ ಪರಿಸ್ಥಿತಿಯಲ್ಲಿ ಬಾಳುತ್ತಿರುವ ಅಂಬೇಡ್ಕರ್ ಕಾಲೊನಿಯ ಚಕ್ಲಿಯಾ ಸಮುದಾಯದ ಜನತೆ, ಇದೀಗ ಪ್ರತಿರೋಧದ ಮೂಲಕ ತಮ್ಮ ಆಕ್ರೋಶದ ದನಿಯನ್ನು ಹೊರಹಾಕುತ್ತಿದ್ದಾರೆ.

“ಇಂದಿನಿಂದ ನಾವು ಮೇಲ್ಜಾತಿಯವರ ಶವ ಸಂಸ್ಕಾರ ಮಾಡುವುದಿಲ್ಲ, ನಾವು ಈ ಕೆಲಸವನ್ನು ಇನ್ನು ಮುಂದೆ ಮಾಡುವುದಿಲ್ಲ” ಎನ್ನುತ್ತಾರೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುತಲಮಾಡ ಪಂಚಾಯತಿ ವ್ಯಾಪ್ತಿಯ ಗೋವಿಂದಪುರಂ ಗ್ರಾಮದ ಅಂಬೇಡ್ಕರ್ ಕಾಲೊನಿ ನಿವಾಸಿ ಸೆಂದಿಲಕುಮಾರ್. “ಅವರು ನಮ್ಮನ್ನು ಇಂದಿಗೂ ಅಸ್ಪøಶ್ಯರಾಗಿಯೇ ಕಾಣುತ್ತಾರೆ” ಎನ್ನುವುದು ಅವರು ಕೊಟ್ಟ ಕಾರಣ.

1982ರಲ್ಲಿ ಕರುಣಾಕರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಮಿಸಿದ ಅಂಬೇಡ್ಕರ್ ಕಾಲೊನಿಯಲ್ಲಿ ಚಕ್ಲಿಯಾ ಸಮುದಾಯದ 50 ಕುಟುಂಬಗಳಿಗೆ ಆಶ್ರಯ ನೀಡಿತ್ತು. ಕಾಲಕ್ರಮೇಣ ಹೆಚ್ಚಿನ ಎಸ್ಸಿ ಕುಟುಂಬಗಳು ಇಲ್ಲಿಗೆ ಆಗಮಿಸಿ ಇಂದು 450 ಕುಟುಂಬಗಳು, 1500 ಜನರು ವಾಸಿಸುತ್ತಿದ್ದಾರೆ. ಉಳಿದಂತೆ ಎರ್ವಾಲನ್ ಸಮುದಾಯದವರೂ ಇಲ್ಲಿ ನೆಲೆಸಿದ್ದಾರೆ. ಮೇಲ್ಜಾತಿಗೆ ಸೇರಿದ ಗೌಂಡರ್ ಸಮುದಾಯದವರು ದಲಿತರನ್ನು ಅಸ್ಪøಶ್ಯರಂತೆ ಕಾಣುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಗ್ರಾಮದಲ್ಲಿ ಕ್ಷೋಭೆ ಉಂಟಾಗಿತ್ತು. ಪಾಂಡಿ ಭೋಜನಂ ಎಂಬ ಸಾಮುದಾಯಿಕ ಹಬ್ಬದ ರೂವಾರಿ ಸಹೋದರನ್ ಅಯ್ಯಪ್ಪನ್ ಜಾತಿ ತಾರತಮ್ಯದ ವಿರುದ್ಧ ಸತತ ಹೋರಾಟ ನಡೆಸಿದ್ದು, ಇತ್ತೀಚೆಗೆ ಚಕ್ಲಿಯಾ ಸಮುದಾಯದ ದಲಿತರಿಗೆ ಕೇವಲ ಒಂದು ಸಾರ್ವಜನಿಕ ನೀರಿನ ಟ್ಯಾಂಕಿನ ನೀರನ್ನಷ್ಟೇ ಪಡೆಯಲು ಸಾಧ್ಯವಾಗುತ್ತಿದೆ ಎಂದು ಸೆಂದಿಲಕುಮಾರ್ ಆರೋಪಿಸಿದ್ದಾರೆ.

ಇಲ್ಲಿನ ಚಹಾ ಅಂಗಡಿಗಳಲ್ಲಿ ಅಸ್ಪøಶ್ಯರಿಗೆ ಪ್ರತ್ಯೇಕ ಲೋಟಗಳನ್ನು ನೀಡಲಾಗುತ್ತಿದೆ. ಈ ವಿಷಯ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿತ್ತರಗೊಂಡ ನಂತರ ಈ ಪದ್ಧತಿ ಕೈಬಿಡಲಾಗಿದೆ. 2004ರ ಮುನ್ನ ಇಲ್ಲಿನ ಅಸ್ಪøಶ್ಯರಿಗೆ ಕ್ಷೌರ ಮಾಡಿಸಿಕೊಳ್ಳುವುದೂ ಕಷ್ಟವಾಗಿತ್ತು ಎನ್ನುತ್ತಾರೆ ಸೆಂದಿಲಕುಮಾರ್. ಬಹಿರಂಗವಾಗಿ ಹೇಳದಿದ್ದರೂ ಏನಾದರೂ ನೆಪ ಹೇಳಿ ಕ್ಷೌರ ಮಾಡದೆ ಇರುವುದು ಇಂದಿನ ಹವ್ಯಾಸವಾಗಿದೆ. ಸಾಕಷ್ಟು ಕಾಲ ಈ ಅಪಮಾನಗಳನ್ನು ಸಹಿಸಿಕೊಂಡೇ ಬಂದಿರುವ ಅಸ್ಪøಶ್ಯರು ಇಂದು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಎಳವ ಯುವಕನೊಬ್ಬ ಚಕ್ಲಿಯಾ ಸಮುದಾಯದ ಯುವತಿಯನ್ನು ವಿವಾಹವಾದ ಸಂದರ್ಭದಲ್ಲಿ ಎಳವರು ಮತ್ತು ಗೌಂಡರ್ ಸಮುದಾಯದವರು ಚಕ್ಲಿಯಾ ಸಮುದಾಯದವರ ಮೇಲೆ ಆಕ್ರಮಣ ನಡೆಸುವ ಮೂಲಕ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ.

ಅಸ್ಪøಶ್ಯರು ಮೇಲ್ಜಾತಿಯವರ ಹಲ್ಲೆಗೆ ಬೆದರಿ ಚಲ್ಲಾಪಿಲ್ಲಿಯಾಗಿದ್ದಾರೆ. ಇತ್ತೀಚೆಗೆ ನಡೆದ ಪಾಂಡಿಭೋಜನ ಕೂಟದಲ್ಲೂ ಸಹ ಮೇಲ್ಜಾತಿಯವರ ಭಯದಿಂದ ರಾಜಕೀಯ ನಾಯಕರೂ ಭಾಗವಹಿಸಿಲ್ಲ. ರಾಜ್ಯ ಸರ್ಕಾರ ತಮ್ಮ ಸಾಮುದಾಯಿಕ ಹಿತಾಸಕ್ತಿಯನ್ನು ನಿರ್ಲಕ್ಷಿಸುತ್ತಿದೆ ಎಂದು ಚಕ್ಲಿಯಾ ಸಮುದಾಯದ ಜನತೆ ಆರೋಪಿಸುತ್ತಿದ್ದಾರೆ. ಕಾಲೊನಿಯ ಅನೇಕ ಮನೆಗಳಲ್ಲಿ ಶೌಚಾಲಯವೇ ಇಲ್ಲದೆ ಬಯಲಲ್ಲೇ ಮಲಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇಲ್ಲಿನ ಬಹುಪಾಲು ಜನರ ಬಿಪಿಎಲ್ ಕಾರ್ಡುಗಳನ್ನು ಮೇಲ್ದರ್ಜೆಗೆ ಏರಿಸಿ ಎಪಿಎಲ್ ಕಾರ್ಡ್ ಮಾಡಲಾಗಿದೆ. ಸರ್ಕಾರ ತಮ್ಮ ಸ್ಥಾನವನ್ನು ಏಕೆ ಬದಲಾಯಿಸಿದೆ ಎಂದು ಯಾರಿಗೂ ತಿಳಿದಿಲ್ಲ ಎಂದು ಇಲ್ಲಿನ ನಿವಾಸಿಗಳು ಗೋಳಾಡುತ್ತಾರೆ. ಈ ಕಷ್ಟಕರ ಪರಿಸ್ಥಿತಿಯಲ್ಲಿ ಬಾಳುತ್ತಿರುವ ಅಂಬೇಡ್ಕರ್ ಕಾಲೊನಿಯ ಚಕ್ಲಿಯಾ ಸಮುದಾಯದ ಜನತೆ, ಇದೀಗ ತಮ್ಮ ಪ್ರತಿರೋಧದ ಮೂಲಕ ತಮ್ಮ ಆಕ್ರೋಶದ ದನಿಯನ್ನು ಹೊರಹಾಕುತ್ತಿದ್ದಾರೆ.