ಅತ್ಯಾಚಾರಕ್ಕೊಳಗಾದ ಮಹಿಳೆ, ಗಂಡನ ವಿರುದ್ಧವೇ ಕೇರಳ ಪೊಲೀಸರ ಕೇಸು

ತ್ರಿಶೂರ್ : ವಡಕ್ಕಂಚ್ಚೇರಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರದಲ್ಲಿ ನೊಂದ ಮಹಿಳೆಯ ವಿರುದ್ಧ ತ್ರಿಶೂರ್ ಮೆಡಿಕಲ್ ಕಾಲೇಜು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂತೆಯೇ, ಆಕೆಯ ಗಂಡನ ವಿರುದ್ಧ ಅವರ ಮಕ್ಕಳು ಕಿರುಕುಳ ದೂರು ನೀಡಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ನೀಡಿದ ದೂರಿನಂತೆ ಪೊಲೀಸರು ಬಾಲಾಪರಾಧ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದಂಪತಿ ಪೆರಿಂಗಂದೂರು ಮತ್ತು ಕುರಂಚೇರಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾಗ 2006ರಿಂದಲೂ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಸಿಡಬ್ಲ್ಯೂಸಿ ದೂರಿದೆ.

ಸಾಮೂಹಿಕ ಅತ್ಯಾಚಾರ ಪ್ರಕರಣ ಕೃತ್ತಿಮದ್ದಾಗಿದೆ ಎಂದು ಮಹಿಳೆಯ ಗಂಡನ ಪಾಲಕರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿಸಿದ್ದರು. ಹಣಕ್ಕಾಗಿ ಹೊರಿಸಲಾದ ಆರೋಪ ಇದಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಆರೋಪಿಗಳಲ್ಲಿ ವಡಕ್ಕಂಚ್ಚೇರಿ ಮುನಿಸಿಪಲ್ ಕೌನ್ಸಿಲರ್ ಜಯಂತನ್ ನಿರಪರಾಧಿ ಎಂದು ಆತನ ಪಾಲಕರು ಸ್ಪಷ್ಟಪಡಿಸಿದ್ದಾರೆ. ದಂಪತಿಯ ಮಕ್ಕಳು ಕೆಲವು ವರ್ಷದಿಂದ ತಮ್ಮೊಂದಿಗೆ ವಾಸಿಸುತ್ತಿದ್ದಾರೆಂದು ಅವರು ಹೇಳಿದರು.

ತಾನು ತನಿಖಾ ತಂಡದ ಮೇಲೆ ವಿಶ್ವಾಸ ಇಟ್ಟುಕೊಂಡಿಲ್ಲ ಎಂದು ಮಹಿಳೆಯ ದೂರು ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಮೇಲ್ವಿಚಾರಣೆಯಡಿ ತನಿಖೆ ನಡೆಸುವಂತೆ ವಡಕ್ಕಂಚ್ಚೇರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಸೋಮವಾರದಂದು ಪೊಲೀಸರಿಗೆ ಸೂಚಿಸಿದೆ.

ಇದೇ ವೇಳೆ, ಮಕ್ಕಳನ್ನು ತನ್ನ ವಶಕ್ಕೊಪ್ಪಿಸುವಂತೆ ನೊಂದ ಮಹಿಳೆ (ಸಂತ್ರಸ್ತೆ) ಕೇರಳ ಪೊಲೀಸ್ ಮುಖ್ಯಸ್ಥಗೆ ದೂರಿನಲ್ಲಿ ಆಗ್ರಹಿಸಿದ್ದಾಳೆ. ತನ್ನ ಗಂಡನ ಪಾಲಕರು ಮಕ್ಕಳನ್ನು ನೋಡಲು ಮತ್ತು ಕೇರ್ ಮಾಡಲು ಅವಕಾಶ ನೀಡುತ್ತಿಲ್ಲ. ಅಪರಾಧಿಗಳ ಪ್ರಭಾವದಿಂದ ಈ ಪ್ರಕರಣ ತಿರುಚಲು ಪ್ರಯತ್ನಿಸಲಾಗುತ್ತಿದೆ ಎಂದು ಆಕೆ ಆರೋಪಿಸಿದ್ದಾಳೆ.