ಅಮಾನ್ಯ ನೋಟುಗಳಿಂದ ಹಲಗೆ ತಯಾರಿಸಲಿರುವ ಕೇರಳ ಕಂಪೆನಿ

ತಿರುವನಂತಪುರಂ : ಇತ್ತೀಚೆಗೆ ಕೇಂದ್ರ ಸರಕಾರದಿಂದ ಅಮಾನ್ಯಗೊಳಿಸಲ್ಪಟ್ಟ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳು ಕೇರಳದ ಕಣ್ಣೂರು ಜಿಲ್ಲೆಯ ವಳಪಟ್ಟಣಂ ನಗರದಲಿರುವ ಖಾಸಗಿ ಕಂಪೆನಿಯೊಂದರಲ್ಲಿ ತಯಾರಿಸಲಾಗುವ ಹಲಗೆಗಳಿಗೆ ಉಪಯೋಗಿಸಲಾಗುತ್ತಿದೆ.

ಇಲ್ಲಿರುವ 71 ವರ್ಷ ಹಳೆಯ ಪ್ಲೈವುಡ್ ಮತ್ತು ಹಾರ್ಡ್ ಬೋರ್ಡ್ ಉತ್ಪಾದನಾ ಕಂಪೆನಿಯಾದ ವೆಸ್ಟರ್ನ್ ಇಂಡಿಯಾ ಪ್ಲೈವುಡ್ಸ್ ಸಂಸ್ಥೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇರಳ ಶಾಖೆಯು ಅಮಾನ್ಯಗೊಂಡಿರುವ ನೋಟುಗಳನ್ನು ಚೂರು ಮಾಡಿ ಅವುಗಳ ತಿರುಳನ್ನು ನಂತರ ಹಾರ್ಡ್ ಬೋರ್ಡುಗಳ ತಯಾರಿಗೆ ಉಪಯೋಗಿಸುವ ಸಲುವಾಗಿ ಆಯ್ಕೆ ಮಾಡಿದೆ.

ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಕಂಪೆನಿಯನ್ನು ಅಕ್ಟೋಬರ್ ಮೂರನೇ ವಾರ ಸಂಪರ್ಕಿಸಿ ಹಳೆಯ ಹಾಗೂ ಉಪಯೋಗಿಸಲು ಅನರ್ಹವಾದ ನೋಟುಗಳನ್ನು ಬಳಸಿ ಪ್ರಾಯೋಗಿಕವಾಗಿ ಹಾರ್ಡ್ ಬೋರ್ಡ್ ತಯಾರಿಸುವ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದರು ಎಂದು ಕಂಪೆನಿಯ ಆಡಳಿತ ನಿರ್ದೇಶಕ ಪಿ ಕೆ ಮಾಯನ್ ಮೊಹಮ್ಮದ್ ಹೇಳಿದ್ದಾರೆ.

ಪ್ರಾಯೋಗಿಕವಾಗಿ ನಾವು ಆರಂಭದಲ್ಲಿ ಸುಮಾರು 15ರಿಂದ 20 ಚೀಲಗಳಿಷ್ಟಿದ್ದ ಚೂರು ಚೂರು ಮಾಡಿದ ನೋಟುಗಳ ತಿರುಳನ್ನು ಸೃಷ್ಟಿಸಲು ಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ನಂತರ ನಾವು ಇನ್ನಷ್ಟು ಸಂಶೋಧನೆ ಕೈಗೊಂಡು  ಹಲವು ಪ್ರಯತ್ನಗಳ ಮೂಲಕ ಸಫಲತೆ ಸಾಧಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಉಪಯೋಗಕ್ಕೆ ಬಾರದ ಕರೆನ್ಸಿ ನೋಟುಗಳನ್ನು ಚೂರು ಚೂರು ಮಾಡಿ, ಮರುಪೂರಣಗೊಳಿಸಲಾಗುತ್ತದೆ ಅಥವಾ ಅವುಗಳನ್ನು ಕಂಪ್ರೆಸ್ಡ್ ಬ್ಲಾಕುಗಳನ್ನಾಗಿಸಿ  ಉರುವಲು ಆಗಿ ಬಳಸಲಾಗುತ್ತದೆ.