ಮುಖ್ಯಮಂತ್ರಿ ಪಿಣರಾಯಿಯಿಂದ 36 ಮನೆ ಹಸ್ತಾಂತರ ಹಲವು ಯೋಜನೆಗಳಿಗೆ ಚಾಲನೆ

ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿ ಪಿಣರಾಯಿ ಮತ್ತಿತರರು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ತರಿಗೆ ಇರಿಯ ಕಾಟುಮಾಡತ್ ಎಂಬಲ್ಲಿ ಸಾಯಿ ಟ್ರಸ್ಟಿನಿಂದ ನಿರ್ಮಿಸಲಾದ 36 ಮನೆಗಳ ಕೀಲಿ ಕೈ ಹಸ್ತಾಂತರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಿದರು.
ಪ್ರತಿಯೊಂದು ಕುಟುಂಬಕ್ಕೂ ಹತ್ತು ಸೆನ್ಸ್ ಪಟ್ಟಾ ವಿತರಣೆಯನ್ನು ಕಂದಾಯ ಸಚಿವ ಇ ಚಂದ್ರಶೇಖರನ್ ನಿರ್ವಹಿಸಿದರು. ಶ್ರೀ ಸತ್ಯ ಸಾಯಿ ಓರ್ಪನೇಂಜ್ ಟ್ರಸ್ಟ್ ಸಾಯಿ ಪ್ರಸಾದ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಲಾಗಿತ್ತು. ಇಲ್ಲೇ ನಿರ್ಮಿಸಲಾಗುತ್ತಿರುವ ಹೆಲ್ತ್ ಸೆಂಟರ್ ಶಿಲಾನ್ಯಾಸವನ್ನು ಆರೋಗ್ಯ ಮಂತ್ರಿ ಕೆ ಕೆ ಶೈಲಜ ನಿರ್ವಹಿಸಿದರು. ಈ ಸಂದರ್ಭ ಕುಡಿಯುವ ನೀರಿನ ಯೋಜನೆಗೂ ಚಾಲನೆ ನೀಡಲಾಯಿತು.
ಗುರುವಾರದಂದು ಬೆಳಿಗ್ಗೆ ಕಾಞಂಗಾಡ್ ನಗರಕ್ಕಾಗಮಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ 8.4 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಎಂಟು ಅಂತಸ್ಥಿನ ಕಟ್ಟಡಕ್ಕೆ ಶಿಲಾನ್ಯಾಸಗೈದರು. ಎಂಡೋಸಲ್ಫಾನ್ ಪೀಡಿತರಿಗೆ ನಬಾರ್ಡಿನಿಂದ ಅನುಮತಿ ಲಭಿಸಿದ 235 ಯೋಜನೆಗಳಲ್ಲಿ ಇದು ಅತೀ ದೊಡ್ಡ ಯೋಜನೆಯಾಗಿದೆ.