ಮದ್ಯದಂಗಡಿ ನಿಷೇಧ ತಪ್ಪಿಸಲು ಬಾರ್ ಮಾಲಕನ ಸುತ್ತುಮಾರ್ಗ !

ಎರ್ನಾಕುಲಂ : ಹೆದ್ದಾರಿ ಇಕ್ಕೆಲಗಳಲ್ಲಿ 500 ಮೀಟರ್  ಪ್ರದೇಶದಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನೂ ಮುಚ್ಚಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಈಗಾಗಲೇ ಹಲವಾರು ಮದ್ಯದಂಗಡಿಗಳು ಮುಚ್ಚಿದ್ದರೆ, ಕೆಲವು ಬಾರ್ ಮಾಲಕರು ಮಾತ್ರ ರಂಗೋಲಿ ಕೆಳಗಡೆ ತೂರಿ ತಮ್ಮ ಕಾರ್ಯಾಸಾಧಿಸಲು ಯತ್ನಿಸಿ ನ್ಯಾಯಾಲಯದ ಆದೇಶ ತಮಗೆ ಬಾಧಿಸದಂತೆ ನೊಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಎರ್ಣಾಕುಲಂ ಜಿಲ್ಲೆಯ ಪರವೂರ್ ಎಂಬಲ್ಲಿರುವ ಐಶ್ವರ್ಯ ರೆಸ್ಟೋಬಾರ್ ಹೆದ್ದಾರಿಯಿಂದ 150 ಮೀಟರ್ ವ್ಯಾಪ್ತಿಯಲ್ಲಿದ್ದುದರಿಂದ ನಿಷೇಧಿತ ವಲಯದಲ್ಲಿ ಬರುತ್ತಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅದರ ಮಾಲಕರು ಇದೀಗ  ನೇರ ಮಾರ್ಗವನ್ನು ಮುಚ್ಚಿ  ಸುತ್ತು ಮಾರ್ಗ ನಿರ್ಮಿಸಿದ್ದಾರೆ. ಇದರಿಂದಾಗಿ ಈಗ ಇಲ್ಲಿಗೆ ಆಗಮಿಸುವ ಗ್ರಾಹಕರು ಸುಮಾರು 500 ಮೀಟರ್ ಕ್ರಮಿಸಬೇಕಿದೆ. ಈ ಸುತ್ತು ಬಳಸಿನ ಮಾರ್ಗದಿಂದ ಅವರ ಬಾರ್ ಈಗ ಹೆದ್ದಾರಿಯಿಂದ 520 ಮೀಟರ್ ದೂರದಲ್ಲಿದೆ. ಬಾರ್ ಮಾಲಕರ ಚಾತುರ್ಯತೆಯಿಂದ ನಿರ್ಮಿತವಾಗಿರುವ ಈ ಸುತ್ತು ಬಳಸಿನ ರಸ್ತೆಗೆ ರೂ 2 ಲಕ್ಷ ವೆಚ್ಚ ತಗುಲಿದೆ. ಅದಕ್ಕಾಗಿ ಅವರು ಕಾಂಕ್ರೀಟ್ ಸ್ಲ್ಯಾಬುಗಳನ್ನು ಬಳಸಿದ್ದಾರೆ.

ಈ ಬಾರ್ ಈಗ ನಿಷೇಧಿತ ವಲಯದಲ್ಲಿ ಬರುವುದಿಲ್ಲವೆಂದು ಅಧಿಕಾರಿಗಳೂ ಹೇಳಿದ್ದಾರಂತೆ. ಎಲ್ಲವೂ ಸರಿ. ಆದರೆ ಮದಿರೆಯ ದಾಸರಿಗೆ ಬಾರಿನಿಂದ ಹೊರನಡೆಯುವಾಗ ಮಾತ್ರ ಕಾದಿದೆ ಸಂಕಷ್ಟ.  ನಶೆಯಲ್ಲಿರುವವರು ಈ ಸುತ್ತು ಮಾರ್ಗ ದಾಟಿ ಹೇಗೆ ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕು. (ದಿನ್ಯೂಸ್ಮಿನಿಟ್)