ಕೆಂಪಯ್ಯರನ್ನು ದ ಕ ಉಸ್ತುವಾರಿ ಮಾಡಿಲ್ಲ : ಮುಖ್ಯಮಂತ್ರಿ ಸ್ಪಷ್ಟನೆ

ಕೊಪ್ಪಳ : ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಮತೀಯ ದ್ವೇಷದ ಘಟನೆಗಳಿಂದ ಕಂಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನಾಗಿಸಲಾಗಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

“ಹಾಗೆಂದು ನಿಮಗೆ ಹೇಳಿದವರ್ಯಾರು ? ಯಾರನ್ನೂ ಉಸ್ತುವಾರಿಯನ್ನಾಗಿಸಿಲ್ಲ. ಕೆಂಪಯ್ಯ ಅವರು ದಕ್ಷಿಣ ಕನ್ನಡಕ್ಕೆ ಹೋಗುವುದಿಲ್ಲ. ಡಿಜಿ ಹಾಗೂ ಐಜಿಪಿ ಆರ್ ಕೆ ದತ್ತಾ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ)  ಹಾಗೂ ಗುಪ್ತಚರ ಅಧಿಕಾರಿಗಳಿಗೆ  ಅಲ್ಲಿಗೆÉ ಭೇಟಿ ನೀಡಲು ಸೂಚನೆ ನೀಡಿದ್ದೇನೆ” ಎಂದು ಇಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಮುಖ್ಯಮಂತ್ರಿ ತಿಳಿಸಿದರು.

ಶರತ್ ಮಡಿವಾಳ ಸಾವನ್ನು ಘೋಷಿಸುವಲ್ಲಿ ಅನುಸರಿಸಿದ ವಿಳಂಬ ನೀತಿಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಈ ಬಗ್ಗೆ ತಮಗೆ ತಿಳಿದಿಲ್ಲವೆಂದು ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿಯ ಸಮೀಪವರ್ತಿಗಳು ಶರತ್ ಮಡಿವಾಳ ಅವರನ್ನು “ಕೊಂದಿದ್ದಾರೆ” ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ನೀಡಿದ್ದಾರೆನ್ನಲಾದ ಹೇಳಿಕೆಯ ಬಗ್ಗೆ ಪತ್ರಕರ್ತರು ಮುಖ್ಯಮಂತ್ರಿಯ ಗಮನ ಸೆಳೆದಾಗ “ಅವರು (ಪ್ರತಾಪ್ ಸಿಂಹ) ಅಪ್ರಬುದ್ಧ ರಾಜಕಾರಣಿ, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ” ಎಂದರು.