ಹೈಕೋರ್ಟ್ ಮೆಟ್ಟಿಲೇರಿದ ಕೆಂಪಯ್ಯ `ನಕಲಿ’ ಜಾತಿ ಪ್ರಮಾಣಪತ್ರ ಪ್ರಕರಣ

ಬೆಂಗಳೂರು : ಗೃಹ ಸಚಿವರ  ಸಲಹೆಗಾರ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ `ನಕಲಿ’ ಜಾತಿ ಪ್ರಮಾಣಪತ್ರ ಪ್ರಕರಣವು ಹೈಕೋರ್ಟಿನ ಮೆಟ್ಟಿಲೇರಿದೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಕೆಂಪಯ್ಯಗೆ ಕ್ಲೀನ್ ಚಿಟ್ ನೀಡಿದ್ದರೂ ದೂರುದಾರ ದಿನೇಶ್ ಕಳ್ಳಹಳ್ಳಿ ಹೈಕೋರ್ಟಿಗೆ ಅಪೀಲು ಸಲ್ಲಿಸಿ ಬಾಹ್ಯ ಏಜನ್ಸಿಯಿಂದ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

1964ರಲ್ಲಿ ಕೆಂಪಯ್ಯ ಅವರ ಸರಕಾರಿ ಶಾಲೆ ದಾಖಲಾತಿಯಲ್ಲಿ ಅವರು ಪರಿಶಿಷ್ಟ ಜಾತಿಯಲ್ಲದ ಹಾಲುಮತ ಜಾತಿಗೆ  ಸೇರಿದವರೆಂದು  ಬರೆಯಲಾಗಿತ್ತಾದರೂ 1970ರಲ್ಲಿ ಬಿಡಿಒ ಅವರಿಂದ ಪಡೆದ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟರಿಂದ ಸಹಿ ಹಾಕಲ್ಪಟ್ಟ ಜಾತಿ ಪ್ರಮಾಣ ಪತ್ರದಲ್ಲಿ ಕೆಂಪಯ್ಯ ಅವರು ಪರಿಶಿಷ್ಟ ಜಾತಿಗೆ ಸೇರಿದ ಕಾಡುಕುರುಬ ಸಮುದಾಯದವರೆಂದು ಹೇಳಲಾಗಿತ್ತಲ್ಲದೆ ಮುಂದೆ ಅವರು ಪರಿಶಿಷ್ಟ ವಿಭಾಗದಡಿಯಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು ಎಂದು ದೂರುದಾರರು ಆರೋಪಿಸಿದ್ದರು.

ನಾಗರಿಕ ಹಕ್ಕು ನಿರ್ದೇಶನಾಲಯವು ಕೆಂಪಯ್ಯ ಕಾಡು ಕುರುಬ ಜಾತಿಗೆ ಸೇರಿದವರೆಂದು ಪ್ರಮಾಣೀಕರಿಸಿದ ನಂತರ ಕಳೆದ ತಿಂಗಳಷ್ಟೇ ಈ ಪ್ರಕರಣದಲ್ಲಿ ಎಸಿಬಿ ಕೆಂಪಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಕ್ಕಾಗಿ 1990ರಲ್ಲಿ ನಿರ್ದೇಶನಾಲಯ ಕೆಂಪಯ್ಯ ಅವರನ್ನು ದೂಷಿಸಿತ್ತು  ಎಂದು ದೂರುದಾರರು ಹೇಳಿಕೊಂಡಿದ್ದರು.