ಸಾರ್ವಜನಿಕ ಸ್ಥಳ ಸುಸ್ಥಿತಿಯಲ್ಲಿಡಿ

ಬಸ್ ನಿಲ್ದಾಣ, ಸರಕಾರಿ ಕಚೇರಿ ಮುಂತಾದ ಸಾರ್ವಜನಿಕ ಕಟ್ಟಡಗಳ ಮೂಲೆ ಮೂಲೆಯಲ್ಲಿ ತಾಂಬೂಲ ಹಾಗೂ ಗುಟ್ಕಾ ತಿಂದು ಉಗುಳುವುದು ಅಸಹ್ಯ ತರಿಸುತ್ತಿದೆ.
ಗುಟ್ಕಾ ನಿಷೇಧಿಸಿದ್ದರೂ ಪರ್ಯಾಯವಾಗಿ ಬಂದ ಉತ್ಪನ್ನ ಜಗಿಯುವ ಜನ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಹೆಚ್ಚಾಗಿದೆ. ಈ ಮೊದಲು ಎಲೆ ಅಡಕೆ ತಂಬಾಕು ತಿಂದು ಉಗುಳುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ಇತ್ತು. ಇದೀಗ ಗುಟ್ಕಾ ಬಂದ ಮೇಲೆ ಕರಾವಳಿ ಜಿಲ್ಲೆಗಳಲ್ಲೂ ಆ ಪದ್ಧತಿ ವ್ಯಾಪ್ತಿಸಿದೆ.
ಕಚೇರಿ ಕಟ್ಟಡಗಳ ಮೂಲೆ ಮೂಲೆಗಳು ತಾಂಬೂಲ ಮತ್ತು ಗುಟ್ಕಾ ಉಗಿಯುವುದಕ್ಕೆ ಇವೆಯೇನೋ ಎನ್ನುವಂತೆ ಅನ್ನಿಸುತ್ತಿದೆ. ಈ ರೀತಿ ಉಗಿಯುವವರಿಗೆ ಯಾವುದೇ ರಸ್ತೆ ಇರಲಿ, ದೇವರನ್ನು ಹೊತ್ತೊಯ್ಯುವ ರಥಬೀದಿಯೇ ಇರಲಿ ಅಲ್ಲಿ ಗುಟ್ಕಾ, ಕುರುಕುರು ಪ್ಯಾಕೆಟ್, ಪ್ಲಾಸ್ಟಿಕ್ ಕಚಡಾ, ಪಾನೀಯ ಪ್ಲಾಸ್ಟಿಕ್ ಪ್ಯಾಕೆಟ್ ತುಂಬಿರುತ್ತಿದೆ.
ಎಟಿಎಂ ಕೋಣೆಯಲ್ಲಿ ಕಸದ ಬುಟ್ಟಿ ಇದ್ದರೂ ಅದರಲ್ಲಿ ಅಲ್ಪ ಪ್ರಮಾಣದ ಕಾಗದದ ಕಸ ಇರುತ್ತದೆ. ಹೆಚ್ಚಿನ ಪ್ರಮಾಣದ ಕಸ ತೊಟ್ಟಿಯ ಅಚೆ ಇರುತ್ತದೆ. ಕೆಲವು ಬಾರಿ ಕೋಣೆ ತುಂಬೆಲ್ಲ ಕಾಗದ ಕಸ ಹರಡಿರುತ್ತದೆ. ಇನ್ನು ಕೆಲವೆಡೆ ವಾಣಿಜ್ಯ ಮಳಿಗೆ ಪಕ್ಕವೇ ಕಸ ತಂದು ಹಾಕುತ್ತಾರೆ. ಗಾಳಿಗೆ ಅದೆಲ್ಲ ಹಾರಿ ರಸ್ತೆ ತುಂಬ ಆಗುತ್ತದೆ. ಮತ್ತೊಂದೆಡೆ ಕಸದ ತೊಟ್ಟಿ ಖಾಲಿ ಇದ್ದರೂ ಅದರಲ್ಲಿ ಕಸ ಹಾಕದೆ ಪಕ್ಕದಲ್ಲಿ ಬಿಸಾಕಿ ಹೋಗುತ್ತಾರೆ. ಇದರಿಂದ ಕಸ ಪರಿಸರದ ತುಂಬೆಲ್ಲ ಚೆಲ್ಲಾಪಿಲ್ಲಿಯಾಗುತ್ತದೆ. ಇದರಿಂದ ಇಡೀ ನಗರದ ಪರಿಸರ ಮಾಲಿನ್ಯದ ಜತೆ ಕೆಟ್ಟ ಹೆಸರೂ ಬರುತ್ತದೆ. ಎಲ್ಲವನ್ನೂ ಅಧಿಕಾರಿಗಳೇ ಮಾಡಬೇಕೆನ್ನುವುದನ್ನು ಬಿಟ್ಟು ಸಾರ್ವಜನಿಕರೂ ಸಾರ್ವಜನಿಕ ಸ್ಥಳಗಳಲ್ಲಿ ಸುಸ್ಥಿತಿಯಲ್ಲಿಡಲು ಸಹಕರಿಸಬೇಕಾಗಿದೆ

  • ಶಾಂತಾದುರ್ಗ
    ಜೆ ಬಿ ಲೋಬೋ ರೋಡ್
    ಕೊಟ್ಟಾರಚೌಕಿ  ಮಂಗಳೂರು