ನಿರಾಸೆ ದೂರಗೊಳಿಸಿ

ಬದುಕು ಬಂಗಾರ-118

“ನೆನಪಿಡಿ, ಕೆಲವೊಮ್ಮೆ ನಿಮಗೆ ಬೇಕೆನಿಸಿದ್ದು ದೊರೆಯದೇ ಇರುವುದು ಅದೃಷ್ಟದ ಅದ್ಭುತ ಹೊಡೆತ” ಎಂಬುದು ದಲೈ ಲಾಮಾ ಅವರ ಮಾತು. ನಮಗೆ ಬೇಕೆನಿಸಿದ್ದು ದೊರೆಯದ ಅನೇಕ ಸಂದರ್ಭಗಳಿರಬಹುದು. ಜೀವನದಲ್ಲಿ ಎಲ್ಲರಿಗೂ ಇಂತಹ ಅನುಭವಗಳಾಗಿರಬಹುದು. ಬಯಸಿದ್ದು ದೊರೆಯದೇ ಇದ್ದಾಗ ಕೆಲವರಿಗೆ ಆಘಾತವಾದರೆ, ಇನ್ನು ಕೆಲವರು ಸಿಟ್ಟಿನಿಂದ ಚೀರಾಡಬಹುದು. ಮತ್ತೂ ಕೆಲವರು ಅತ್ತು ಮನಸ್ಸನ್ನು ಹಗುರಾಗಿಸಿಕೊಳ್ಳಬಹದು. ಮತ್ತೆ ಕೆಲವರು ಏನೂ ಆಗದಂತೆ ಇದ್ದು ಬಿಡಬಹುದು. ನಿರೀಕ್ಷೆಗಳು ಹುಸಿಯಾದಾಗ ಕಾಡುವ ನಿರಾಸೆಯನ್ನು ದೂರ ಮಾಡಬೇಕೆಂದಿದ್ದರೆ ನೀವೇನು ಮಾಡಬೇಕು ?

ಮನೆಯೊಳಗೆ ಸುಮ್ಮನೆ ಯೋಚಿಸುತ್ತಾ ಕುಳಿತರೆ ಏನೂ ಆಗದು. ಹಾಗೆಯೇ ಎದ್ದು ಹೊರಗೆ ಬಂದು ಬಿಡಿ. ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಹೊತ್ತು ತೇಲಾಡಿ, ಪ್ರಕೃತಿ ಮಾತೆಯ ಸೌಂದರ್ಯವನ್ನು ಆಸ್ವಾದಿಸಿ, ಆಗಸ ದಿಟ್ಟಿಸಿ ಅಲ್ಲಿನ ಮೋಡಗಳ ಆಟವನ್ನು ಕಣ್ತುಂಬಿಕೊಳ್ಳಿ. ಮನಸ್ಸು ಪ್ರಶಾಂತಗೊಳ್ಳುವುದು. ಕತ್ತಲಾಗಿದ್ದರೆ ಆಗಸದಲ್ಲಿನ ನಕ್ಷತ್ರಗಳನ್ನೇ ತದೇಕಚಿತ್ತದಿಂದ ನೋಡಿ, ನಕ್ಷತ್ರಗಳ ಲೋಕದಲ್ಲಿ ವಿಹರಿಸಿ ಮತ್ತೆ ಮನೆಗೆ ಬಂದು ಬಿಡಿ. ಚೆನ್ನಾಗಿ ನಿದ್ದೆ ಮಾಡಿ. ಬೆಳಗೆದ್ದಾಗ ನಿಮ್ಮ ನಿರಾಸೆ, ಆತಂಕ ಎಲ್ಲವೂ ಮಾರು ದೂರ ಓಡಿ ಹೋಗಿರುತ್ತದೆ.

ಜೀವನದಿಂದ ಉಲ್ಲಾಸ ದೂರವಾಗಿದೆ, ಎಲ್ಲವೂ ಯಾಂತ್ರಿಕವಾಗಿ ಬಿಟ್ಟಿದೆಯೆಂದು ಮನಸ್ಸು ಚಡಪಡಿಸುತ್ತಿದೆಯೆಂದಾದರೆ ತಡ ಮಾಡದೆ ವಾರಾಂತ್ಯದಲ್ಲಿ ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಡನೆ ಎಲ್ಲಾದರೂ ಸುತ್ತಾಡಲು ಹೋಗಿ ಒಂದೆರಡು ದಿನ ಎಲ್ಲಾ ಜಂಜಡಗಳಿಂದಲೂ ದೂರವಿದ್ದು ಹಾಯಾಗಿದ್ದು ಬಿಡಿ.

ಬರವಣಿಗೆ ನಿಮ್ಮ ಇಷ್ಟದ ಹವ್ಯಾಸವಾಗಿದ್ದರೆ, ನಿಮ್ಮ ಮೊಬೈಲ್ ಫೋನ್, ಕಂಪ್ಯೂಟರನ್ನು ಬದಿಗಿಟ್ಟು ಪೆನ್ನು ಪೇಪರ್ ಕೈಗೆತ್ತಿಕೊಂಡು ಮನಸ್ಸಿಗೆ ತೋಚಿದ್ದನ್ನು ಬರೆಯಿರಿ. ಕವನವೊಂದನ್ನು ಗೀಚಿ, ಇಲ್ಲವೇ ಪುಟ್ಟ ಕಥೆಯೊಂದನ್ನಾದರೂ ಬರೆಯಿರಿ. ಅದನ್ನು ನಿಮ್ಮ ಸಂಗಾತಿ ಇಲ್ಲವೇ ನಿಮ್ಮ ಗೆಳೆಯರಿಗೆ ಓದಲು ನೀಡಿ, ಅವರು ಓದಿ ನಿಮ್ಮನ್ನು ಭೇಷ್ ಎಂದು ಹೊಗಳಿದಾಗ ನಿಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ.

ಬಾಲ್ಯದ ಸಿಹಿ ಕಹಿ ಘಟನೆಗಳನ್ನು ಮೆಲುಕು ಹಾಕಿ. ಆಗ ಕೂಡ ನಿಮಗೆ ಕೇಳಿದ್ದು ದೊರೆಯುತ್ತಿರಲಿಲ್ಲವೆಂಬುದನ್ನು ಮರೆಯಬೇಡಿ. ನಿರಾಸೆಯಾದಾಗ ಹೇಗೆ ಮೂಲೆಯಲ್ಲಿ ಮುದುಡಿ ಕುಳಿತು ಅಳುತ್ತಿದ್ದಿರೆಂಬುದನ್ನು ನೀವು ಪ್ರಾಯಶಃ ಮರೆತಿರಲಿಕ್ಕಿಲ್ಲ. ಅದನ್ನೊಮ್ಮೆ ನೆನೆಸಿ ನಕ್ಕು ಬಿಡಿ. ಈಗ ನಿಮ್ಮನ್ನು ಕಾಡುವ ನಿರಾಸೆ ಕೂಡ ಹಾಗೆಯೇ ಎಂದುಕೊಳ್ಳಿ.