ನೆಲದ ಕಾನೂನಿನಂತೆ ಕಾವ್ಯಾ ಸಾವಿನ ತನಿಖೆ ನಡೆಯಬೇಕೇ ಹೊರತು ಕೆಲವರ ಇಷ್ಟದಂತಲ್ಲ

ಮೋಹನ ಆಳ್ವ ಬೆಂಬಲ ಸಭೆಯಲ್ಲಿ ವಿವೇಕ್ ರೈ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ವಿದ್ಯಾರ್ಥಿನಿ ಕಾವ್ಯಾ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ ವಿರುದ್ಧ ನಡೆಸುತ್ತಿರುವ ತೇಜೋವಧೆಯನ್ನು ನಿಲ್ಲಿಸುವಂತೆ ಆಗ್ರಹಿಸುವ ಹಾಗೂ ಆಳ್ವರನ್ನು ಬೆಂಬಲಿಸುವ ಸಾರ್ವಜನಿಕ ಸಭೆ ಸ್ವರಾಜ್ಯ ಮೈದಾನದಲ್ಲಿ ಶನಿವಾರ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ವೈದೇಹಿ, “ಮೋಹನ ಆಳ್ವ ಕಣ್ಣು ಕೋರೈಸುವ ರೀತಿಯಲ್ಲಿ ಯಶಸ್ಸು ಸಾಧಿಸಿದಾಗ ಅದನ್ನು ಹೊಡೆಯಲು ಕೆಲವರು ಹವಣಿಸಿಸುತ್ತಿದ್ದರು. ಕಾವ್ಯಾ ಸಾವಿನ ಹೆಗಲ ಮೇಲೆ ಕೋವಿಯಿಟ್ಟು ಆ ಕೆಲಸ ಮಾಡಿದ್ದಾರೆ. ಇನ್ನೊಬ್ಬರ ಸಾಧನೆ ನೋಡಿ ಅಸೂಯೆಪಡುವವರಿದ್ದಾರೆ. ಇಂತದನ್ನು ಮಾಡಬೇಕೆಂದು ಕಾಯ್ತಿರೊ ಕೆಲವರಿಗೆ ಕಾವ್ಯಾ ಪ್ರಕರಣ ಒಂದು ನೆಪ ಮಾತ್ರ. ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿರುವ ಮೋಹನ ಅಳ್ವ ಅದನ್ನು ಗೆದ್ದು ಬರುತ್ತಾರೆ” ಎಂದರು.

“ಕೆಲವು ಟೀವಿ ಮಾಧ್ಯಮಗಳು ಟಿಆರ್ಪಿಗಾಗಿ ಸಮಾಜಕ್ಕೆ ತಪ್ಪು ಮಾಹಿತಿ ಕೊಟ್ಟು ವಿಷಬೀಜ ಬಿತ್ತುತ್ತಿವೆ. ಈ ರೀತಿ ಜನರನ್ನು ಯಾಕೆ ಕೆರಳಿಸುತ್ತೀರಿ” ಎಂದು ವೈದೇಹಿ ಪ್ರಶ್ನಿಸಿದರು.

ವಿಶ್ರಾಂತ ಕುಲಪತಿ ಬಿ ಎ ವಿವೇಕ್ ರೈ ಮಾತನಾಡಿ, “ಕಾವ್ಯಾ ಘಟನೆಯಿಂದ ನೋವಾಗಿದೆ. ಪ್ರಕರಣ ಈ ನೆಲದ ಕಾನೂನಿನಂತೆ ವಿಚಾರಣೆ ನಡೆಯಬೇಕೆ ಹೊರತು ಕೆಲವರ ಇಷ್ಟದಂತಲ್ಲ. ಅಳ್ವಾಸಿನ 26 ಸಾವಿರ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯ ತುಂಬಬೇಕು ಮತ್ತು ಅವರ ಹೆತ್ತವರ ಆತಂಕ ದೂರಮಾಡಬೇಕು. ವಿದ್ಯಾರ್ಥಿ ನಿಲಯಗಳು ನಿಯಮಾನುಸಾರ ಇವೆಯೆ ಎಂಬುದನ್ನು ಸರಕಾರ ತನಿಖೆಗೊಳಪಡಿಸುವಾಗ ಆಳ್ವಾಸ್ ಸಂಸ್ಥೆಯನ್ನು ಪ್ರತ್ಯೇಕಿಸದೆ ಎಲ್ಲಾ ಶಿಕ್ಷಣ ಸಂಸ್ಥೆಗಳಂತೆ ಇದನ್ನು ನೋಡಲಿ” ಎಂದರು.

ಮುಲ್ಕಿ ಚರ್ಚ್ ಫಾದರ್ ಎಫ್ ಎಕ್ಸ್ ಗೋಮ್ಸ್ ಮಾತನಾಡಿ, “ಮೋಹನ ಆಳ್ವರನ್ನು ನಲ್ವತ್ತು ವರ್ಷದಿಂದ ನಾನು ಬಲ್ಲೆ. ಶಿಸ್ತಿನಲ್ಲಿ ರಾಜಿ ಮಾಡಿಕೊಂಡವರಲ್ಲ. ಅವರಲ್ಲಿ ನೈಜತೆ, ದೃಢತೆ ಇದೆ. ಅವರ ಹೃದಯ ವೈಶಾಲ್ಯತೆಯನ್ನು ಅರ್ಥಮಾಡಿಕೊಳ್ಳದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಹುಟ್ಟಿಕೊಂಡಿರುವ ಎಲ್ಲ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿದೆ. ಅವರು ಜಯಶೀಲರಾಗಿ ಬರುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಕ್ರೀಡಾಪಟು ಸಹನಾ ಪೂಜಾರಿ ಮಾತನಾಡಿ, “ಕಾವ್ಯಾ ಒಳ್ಳೆಯ ಕ್ರೀಡಾಪಟು ಆಗಬೇಕೆಂಬ ಆಸೆ ಮೋಹನ ಆಳ್ವರಿಗಿತ್ತು. ಕಾವ್ಯಾ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥರೆನ್ನಲು ನಾವ್ಯಾರು ಕೋರ್ಟ್ ಅಲ್ಲ. ಆಳ್ವಾಸ್ ಸಂಸ್ಥೆಯಲ್ಲಿ ಶೇ 50ರಷ್ಟು ಬಿಲ್ಲವರೇ ಇದ್ದಾರೆ. ನಾನು ಕ್ರೀಡಾ ಕ್ಷೇತ್ರದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಇತರ ಜಾತಿಯವರ ಸಹಕಾರವು ಸಿಕ್ಕಿದೆ” ಎಂದ ಆಕೆ ಈ ಪ್ರಕರಣದಲ್ಲಿ ಜಾತಿ ವಿಷಯವನ್ನು ಎಳೆದು ತಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಮಂಡ್ಯ ನಗರಸಭೆಯ ಮಾಜಿ ಅಧ್ಯಕ್ಷೆ ಅಂಬುಜ ಮಾತನಾಡಿ, “ಕಾವ್ಯಾ ಪ್ರಕರಣದಲ್ಲಿ ಮೋಹನ ಆಳ್ವರನ್ನು ಹೊಣೆಗಾರರನ್ನಾಗಿಸುವುದು ತಪ್ಪು. ಪರೀಕ್ಷೆಯಲ್ಲಿ ಫೇಲಾದ ಕೆಲ ವಿದ್ಯಾರ್ಥಿಗಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಅನೇಕ ಪ್ರಕರಣಗಳಿವೆ. ಆಗ ಯಾರ ಮೇಲೆ ಆರೋಪ ಹೊರಿಸುತ್ತೀರಿ. ಮೀನು ತಲೆ ತಿನ್ನುವ ಬುದ್ಧಿವಂತರ ನಾಡಿನಲ್ಲಿ ಸುಳ್ಳು ಆರೋಪಗಳನ್ನು ಕೇಳಿಸಿಕೊಂಡು ಯಾಕೆ ಸುಮ್ಮನಿದ್ದಿರಿ ಎಂದು ಗೊತ್ತಾಗುತ್ತಿಲ್ಲ. ಅಪಪ್ರಚಾರ ಮಾಡಲು ಕೊಂಡಿಮಂಚಣ್ಣ ಹುಟ್ಟಿಕೊಂಡಿದ್ದಾನೆ” ಎಂದರು. ಕಾರ್ಯಕ್ರಮಕ್ಕೆ ಮೊದಲು ಸಭಿಕರಿಂದ ಕಾವ್ಯಾಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.