ಅರೆಬರೆ ಡ್ರೈನೇಜ್ ಕಾಮಗಾರಿ : ಕಾಪು ಗ್ರಾಮಸ್ಥರು ಆತಂಕದಲ್ಲಿ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಮಗ ಜಿಲ್ಲಾಧಿಕಾರಿಯಾದರೂ ಅಜ್ಜಿಗೆ ರಾಗಿ ಬಿಸೋದು ತಪ್ಪಿಲ್ಲ ಎಂಬ ಮಾತಿನಂತೆ ಕಾಪು ಪುರಸಭೆಯಾಗಿ ಇದೀಗ ತಾಲೂಕು ಕೇಂದ್ರವಾಗಿ ಬದಲಾದರೂ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಅರೆಬರೆ ಕಾಮಗಾರಿಯಿಂದ ಜನರು ಪಡುತ್ತಿರುವ ಸಮಸ್ಯೆಗೆ ಯಾವುದೇ ಅಧಿಕಾರಿಯಾಗಲೀ, ಜನಪ್ರತಿನಿಧಿಯಾಗಲೀ ಸ್ಪಂದಿಸುತ್ತಿಲ್ಲ ಎಂಬುದು ಜನಸಾಮಾನ್ಯರ ನೋವಿನ ನುಡಿ.

ಕಾಪುವಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪತ ಕಾಮಗಾರಿ ಪ್ರಾರಂಭವಾಗಿದ್ದರಿಂದ ಒಂದಲ್ಲ ಒಂದು ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಸೂಕ್ತ ಒಳ ಚರಂಡಿ ವ್ಯವಸ್ಥೆ ಇಲ್ಲದೆ. ಹೆದ್ದಾರಿ ಸಮೀಪದ ಹಲವು ಮನೆಗಳಿಗೆ ಮಳೆಯ ಕೆಸರುನೀರು ಹೊಕ್ಕು ರಾತೋರಾತ್ರಿ ಈ ಭಾಗದ ನಿವಾಸಿಗಳು ಮನೆ ಬಿಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಮಳೆಗಾಲ ಮುಗಿಯುತ್ತಿದ್ದಂತೆ ಒಳ ಚರಂಡಿ ಕಾಮಗಾರಿ ಆರಂಭಗೊಂಡಿದೆಯಾದರೂ ಆಮೆ ಗತಿಯಲ್ಲಿ ಸಾಗಿ ಇದೀಗ ಸ್ಥಗಿತಗೊಂಡು ತಿಂಗಳೇ ಕಳೆದಿದೆ. ಒಳ ಚರಂಡಿಗಾಗಿ ಬಳಸಿದ ಉಕ್ಕಿನ ರಾಡುಗಳು ಅಮಾಯಕರ ಪ್ರಾಣ ಬಲಿಗಾಗಿ ಕಾಯುವಂತಿದೆ. ಕಾಮಗಾರಿ ಪ್ರದೇಶದಲ್ಲಿ ಯಾವುದೇ ಎಚ್ಚರಿಕಾ ನಾಮಫಲಕಗಳಿಲ್ಲದೆ ಜನರು ಮಾಮೂಲಿನಂತೆ ಸಂಚರಿಸುತ್ತಿದ್ದು, ಎಡವಿ ಅರೆಬರೆಯಾಗಿ ನಿಂತಿರುವ ಚರಂಡಿಗೇನಾದರೂ ಬಿದ್ದರೆ ದೇವರೇ ಗತಿ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಪ್ರದೇಶ ಇದಾಗಿದೆ.

ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದಿದ್ದರಾದರೂ ಈವರೆಗೆ ಯಾವುದೇ ಅಧಿಕಾರಿ ಸ್ಪಂದಿಸಿಲ್ಲ. ನಿರ್ಲಕ್ಷ್ಯವನ್ನು ಮುಂದುವರಿಸಿದ್ದಲ್ಲಿ ಅನಿವಾರ್ಯವಾಗಿ ಪ್ರತಿಭಟಿಸಬೇಕಾದೀತು ಎಂಬುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.