ಕಾಪು ತಾಲೂಕಿಗೆ ತಿಂಗಳಾಂತ್ಯದೊಳಗೆ ಮೂಲ ಸೌಕರ್ಯ : ಕಾಗೋಡು ತಿಮ್ಮಪ್ಪ

ಕರಾವಳಿ ಅಲೆ ವರದಿ

ಪಡುಬಿದ್ರಿ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕಂದಾಯ ಇಲಾಖೆಗೆ ಸಂಬಂಧಪಟ್ಟು ಮಾಡಿರುವ ಘೋಷಣೆಗಳನ್ನು ಚುನಾವಣೆಗೆ ಮೊದಲೇ ಈಡೇರಿಸುವ ಜವಾಬ್ದಾರಿ ಸರಕಾರದ್ದಾಗಿದ್ದು, ಅದಕ್ಕಾಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆಯನ್ನೂ ನಡೆಸÀಲಾಗಿದೆ. ಕರಾವಳಿ ಭಾಗದಲ್ಲಿಯೂ ಕಂದಾಯ ಇಲಾಖೆಗೆ ಸಂಬಂಧಪಟ್ಟು ಅತ್ಯವಶ್ಯಕವಾಗಿ ಬಗೆಹರಿಸಲೇ ಬೇಕಾದ ಹಲವು ಸಮಸ್ಯೆಗಳಿದ್ದು, ಆ ಕುರಿತಾಗಿ ಚರ್ಚಿಸಲು ಕರಾವಳಿ ಶಾಸಕರೊಂದಿಗೆ ಒಂದು ವಾರದೊಳಗೆ ವಿಶೇಷ ಸಭೆ ನಡೆಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಬುಧವಾರ ಕಾಪು ಬಂಗ್ಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ನೂತನ ಕಾಪು ತಾಲೂಕು ಉದ್ಘಾಟನೆ, ಅಧಿಕೃತ ಘೋಷಣೆ ಮತ್ತು ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕಾಪು ತಾಲೂಕು ಶಾಸಕ ವಿನಯಕುಮಾರ್ ಸೊರಕೆಯವರ ಕನಸಿನ ಕೂಸು. ಅವರ ಅಭಿಲಾಷೆಯಂತೆ, ಹೋರಾಟ ಸಮಿತಿ, ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಜನತೆಯ ಬೇಡಿಕೆಗೆ ಮಣಿದು ಸರಕಾರ ಕಾಪು ತಾಲೂಕನ್ನು ಘೋಷಣೆ ಮಾಡಿದೆ. ಅದಕ್ಕೆ ಪೂರಕವಾಗಿ ಅನುದಾನ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಕಾಪು ತಾಲೂಕನ್ನು ಮಾದರಿ ತಾಲೂಕನ್ನಾಗಿ ಪರಿವರ್ತಿಸುವ ಜವಾಬ್ದಾರಿಯೂ ಸರಕಾರದ್ದಾಗಿದೆ. ಈ ನಿಟ್ಟಿನಲ್ಲಿ ಕಾಪು ತಾಲೂಕಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನೂ ತಿಂಗಳಾಂತ್ಯದೊಳಗೆ ಒದಗಿಸಲು ನಾನು ಬದ್ಧನಿದ್ದೇನೆ” ಎಂದು ಅವರು ಹೇಳಿದರು.

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕಂದಾಯ ಇಲಾಖೆಗೆ ಸಂಬಂಧಪಟ್ಟ ವಿವಿಧ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ ಅವರು ಅಧಿಕಾರಿಗಳ ಜಡತ್ವ ಬಿಡಿಸಿದಲ್ಲಿ ಮಾತ್ರ ನಮ್ಮ ಕೆಲಸ ನಡೆಯಲು ಸಾಧ್ಯ. ಜಡತ್ವ ಬಿಡಿಸಬೇಕಾದರೆ ಅವರನ್ನು ತರಾಟೆಗೆ ತೆಗೆದುಕೊಳ್ಳಬೇಕಾಗುತ್ತೆ, ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ವಾಸಕ್ಕೆ ಹಕ್ಕು ಪತ್ರ ವಿತರಣೆ ಸಹಿತವಾಗಿ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ಮತ್ತು ವಿಎಗಳು ಕಡ್ಡಾಯವಾಗಿ ಗ್ರಾಮಕ್ಕೆ ತೆರಳಿ ಮಾಹಿತಿ ಸಂಗ್ರಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ನಾಳೆಯಿಂದಲೇ ಇದನ್ನು ಪರಿಸಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, “ಕಾಪುವಿಗೆ ಐಡೆಂಟಿಟಿ ಬರಬೇಕಾದರೆ ತಾಲೂಕು ರಚನೆ ಅಗತ್ಯವಾಗಿ ನಡೆಯಬೇಕಿದೆ ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಮುಂದಿರಿಸಿದ್ದು, ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ದೊರಕಿದೆ. ಕಾಪು ತಾಲೂಕು ರಚನೆಯಾಗುತ್ತಲೇ ಸರಕಾರದ ಎಲ್ಲಾ ಕಚೇರಿಗಳೂ ಕಾಪುವಿಗೆ ಬರಲಿದ್ದು, ಇದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಕಾಪು ಬಂಗ್ಲೆ ಮೈದಾನವನ್ನು ಸರಕಾರಿ ಕಾಂಪ್ಲೆಕ್ಸ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಅದಕ್ಕೂ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.

LEAVE A REPLY