ಇಂದು ಕಂದಾಯ ಸಚಿವರಿಂದ ಕಾಪು ತಾಲೂಕು ಉದ್ಘಾಟನೆ

ಕರಾವಳಿ ಅಲೆ  ವರದಿ

ಪಡುಬಿದ್ರಿ : “ಹೊಸದಾಗಿ ಘೋಷಿಸಲ್ಪಟ್ಟಿರುವ ನೂತನ ಕಾಪು ತಾಲೂಕು ಬುಧವಾರದಿಂದ ಕಾರ್ಯಾರಂಭಿಸಲಿದ್ದು, ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ನೂತನ ತಾಲೂಕನ್ನು ಉದ್ಘಾಟಿಸಲಿದ್ದಾರೆ” ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

“ಕಾಪು ಬಂಗ್ಲೆ ಮೈದಾನದಲ್ಲಿ ಅಪರಾಹ್ನ 3 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿನಯಕುಮಾರ್ ಸೊರಕೆ ವಹಿಸಲಿದ್ದಾರೆ. ಕಾರ್ಕಳ ಶಾಸಕ ಸುನಿಲಕುಮಾರ್, ವಿಧಾನ ಪರಿಷತ್ ಸದಸ್ಯ ಕ್ಯಾ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ ಅಧ್ಯಕ್ಷ ದಿನಕರ ಬಾಬು, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್, ಸಂಸದ ಬಿ ಎಸ್ ಯಡ್ಯೂರಪ್ಪ, ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಕಾಪು ಪುರಸಭೆಯ ಅಧ್ಯಕ್ಷೆ ಮಾಲಿನಿ, ತಾಲೂಕು ಪಂಚಾಯತ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ ಎ ಗಫೂರ್ ಸಹಿತ ವಿವಿಧ ಇಲಾಖಾಧಿಕಾರಿಗಳು ಮುಖ್ಯ ಅತಿಥಿಗಳಾಗಿರುತ್ತಾರೆ” ಎಂದು ತಿಳಿಸಿದರು.

 ಇಂದು ಕಚೇರಿ ಕಾರ್ಯಾರಂಭ

“ಕಾಪು ಬಂಗ್ಲೆ ಮೈದಾನದಲ್ಲಿರುವ ನಾಡಕಚೇರಿ ಆವರಣದಲ್ಲಿ ನೂತನ ತಾಲೂಕಿನ ತಾತ್ಕಾಲಿಕ ಕಚೇರಿ ಕಾರ್ಯಾರಂಭಿಸಲಿದ್ದು, ಸದ್ಯಕ್ಕೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ನೂತನ ತಾಲೂಕಿನ ತಹಶೀಲ್ದಾರ್ ಆಗಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸದ್ಯಕ್ಕೆ ಭೂಮಿ ಕೇಂದ್ರ ಒಂದನ್ನು ಹೊರತುಪಡಿಸಿ ತಾಲೂಕಿನ ಎಲ್ಲಾ ಕೆಲಸಗಳು ಇನ್ನು ಮುಂದೆ ಕಾಪುವಿನಲ್ಲೇ ನಡೆಯಲಿದೆ. ತಾಲೂಕಿನಲ್ಲಿರುವ ಹೆಚ್ಚುವರಿ ಗ್ರಾಮಲೆಕ್ಕಿಗರು ಮತ್ತು ಇತರ ಅಧಿಕಾರಿಗಳನ್ನು ಬಳಸಿಕೊಂಡು ಕಚೇರಿ ಕಾರ್ಯ ಕಲಾಪಗಳು ನಡೆಯಲಿದೆ”’ ಎಂದು ತಿಳಿಸಿದರು.

“ಕಾಪು ಬಂಗ್ಲೆ ಮೈದಾನದಲ್ಲಿ ಇರುವ ಜಮೀನಿನಲ್ಲಿ ಒಂದಿಂಚೂ ಹಾಳಾಗದಂತೆ ಕಚೇರಿ ಕಟ್ಟಡ ನಿರ್ಮಿಸಲು ಮಾಸ್ಟರ್ ಪ್ಲಾನ್ ಮಾಡಿಕೊಳ್ಳಲಾಗಿದೆ. ನೂತನ ತಾಲೂಕಿನ ಮಿನಿ ವಿಧಾನಸೌಧ ನಿರ್ಮಿಸುವ ಚಿಂತನೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಡುಬಿದ್ರಿ ಮತ್ತು ಶಿರ್ವದಲ್ಲೂ ನಾಡಕಚೇರಿ ಆರಂಭಿಸಲಾಗುವುದು” ಎಂದರು.

ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಬೆಳಪು ಗ್ರಾ ಪಂ ಅಧ್ಯಕ್ಷ ಮತ್ತು ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮತ್ತಿತರರಿದ್ದರು.

 

 

 

LEAVE A REPLY