`ನಿಷ್ಟಾವಂತ ಪತ್ರಕರ್ತರಿಗೆ ಸಲ್ಲುವ ಗೌರವ ನೋವೊಂದೆ’

ಪಡುಬಿದ್ರಿ : “ಹಣವಂತ ಹಾಗೂ ರಾಜಕೀಯ ಪ್ರಭಾವಿ ವ್ಯಕ್ತಿಗಳ ವಿರುದ್ಧ ಪತ್ರಿಕೆಗಳಲ್ಲಿ ವರದಿಗಾರನೊಬ್ಬ ಸತ್ಯ ಘಟನೆಯ ವರದಿ ಮಾಡಿದ್ದೇ ಆದಲ್ಲಿ ಆತನಿಗೆ ಸಲ್ಲುವ ಗೌರವ ಪತ್ರಿಕೆಯಿಂದ ಗೇಟ್ ಪಾಸ್. ಅದೇ ನಿಷ್ಟಾವಂತ ಪತ್ರಕರ್ತ ಜಯಂತ್ ಪಡುಬಿದ್ರಿಯ ಪತ್ರಿಕಾ ಜೀವನವನ್ನು ಬುಡಮೇಲು ಮಾಡಿದ ಘಟನೆ” ಎಂದು ಅವರ ಸಹೊದ್ಯೋಗಿ ಮಿತ್ರ ಆರೀಫ್ ಪಡುಬಿದ್ರಿ ಹೇಳಿದರು.

ಹಿರಿಯ ಪತ್ರಕರ್ತ ಜಯಂತ್ ಪಡುಬಿದ್ರಿ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಕಾಪು ಪ್ರೆಸ್ ಕ್ಲಬ್ ಆಯೋಜಿಸಿದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. “ಜಯಂತ್ ಪಡುಬಿದ್ರಿಯವರು ಮಣಿಪಾಲದ ಪೈ ವಾಣಿಯಲ್ಲಿ ವರದಿಗಾರರಾಗಿದ್ದ ಸಂದರ್ಭ ಕಂಡದಲೆಯ ಯೋಜನೆಯೊಂದರ ವಿರುದ್ಧ ಗ್ರಾಮಸ್ಥರ ಪ್ರತಿಭಟನೆಯ ಸುದ್ದಿ ಮಾಡಲು ಹೋಗಿ, ಘಟನೆಯ ಸತ್ಯತೆಯನ್ನು ವರದಿ ಮಾಡಿ ಆ ಭಾಗದ ಅಂದಿನ ಶಾಸಕರ ಕೆಂಗ್ಗಣ್ಣಿಗೆ ಗುರಿಯಾಗಿ, ಜೆಡಿಎಸ್ ಅಧಿಕಾರದಲ್ಲಿದ್ದರಿಂದ ಪಕ್ಷದ ಸಚಿವರೊಬ್ಬರ ಪ್ರಭಾವ ಬಳಸಿ ಪೈ ವಾಣಿಯಿಂದ ಗೇಟ್ ಪಾಸ್ ನೀಡುವಲ್ಲಿ ಆ ಭಾಗದ ಶಾಸಕರು ಸಫಲರಾಗಿದ್ದು, ಅದೇ ಘಟನೆ ನಿಷ್ಟಾವಂತ ಪತ್ರಕರ್ತ ಜಯಂತ್ ಪಡುಬಿದ್ರಿಯ ಆತ್ಮಸ್ಥೆರ್ಯವನ್ನು ಕುಗ್ಗುವಂತೆ ಮಾಡಿದ್ದಲ್ಲದೆ ಜೀವನದಲ್ಲಿ ಬಲುದೊಡ್ಡ ಹೊಡೆತನ್ನು ನೀಡಿದೆ. ಅದೇ ಅವರ ಅಕಾಲಿಕ ಮರಣಕ್ಕೆ ಪರೋಕ್ಷ ಕಾರಣವಾಯಿತು” ಎಂದು ವಿಷಾದ ವ್ಯಕ್ತಪಡಿಸಿದರು. ಸಭೆಯಲ್ಲಿ ಗ್ರಾಮದ ಅನೇಕ ಗಣ್ಯರು ಭಾಗವಹಿಸಿದ್ದರು.