ಎಟಿಎಂ ತಿಂಗಳಿಂದ ಬಂದ್ ; ಠುಸ್ಸಾದ ಕಟೀಲ್ ಭರವಸೆ

ವಿಶೇಷ ವರದಿ

ಮಂಗಳೂರು : ಮೂರು ದಿನಗಳಲ್ಲಿ ಎಟಿಎಂ ಹಣಕಾಸು ಸಮಸ್ಯೆ ನಿವಾರಣೆ ಆಗುವುದು ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನಕುಮಾರ್ ಕಟೀಲ್ ಹೇಳಿಕೆ ನೀಡಿರುವ ಹೊರತಾಗಿಯೂ ಜಿಲ್ಲೆಯ ಹಲವು ಎಟಿಎಂಗಳು ಮೂವತ್ತು ದಿನಗಳಿಂದ ಬಾಗಿಲು ಹಾಕಿವೆ.

ಹಳೇ ನೋಟುಗಳ ನಿಷೇಧದ ಬಳಿಕ ನಗರದ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ನಗದು ಕೊರತೆ ಹಿನ್ನೆಲೆಯಲ್ಲಿ ಸಂಸದರು ನ 20ರಂದು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದ್ದರು. ಜಿಲ್ಲೆಯ ಲೀಡ್ ಬ್ಯಾಂಕ್ ಅಧಿಕಾರಿ ಸಹಿತ ಹಲವು ಬ್ಯಾಂಕುಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಸಭೆಯ ನಂತರ ಹೇಳಿಕೆ ನೀಡಿದ ನಳಿನ್, “ಇನ್ನು ಮೂರು ದಿನಗಳಲ್ಲಿ ಎಟಿಎಂಗಳಲ್ಲಿ ನಗರದು ಕೊರತೆ ಸಮಸ್ಯೆ ನಿವಾರಣೆ ಆಗಲಿದೆ” ಎಂದು ಹೇಳಿಕೆ ನೀಡಿದ್ದರು.

atm

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಡ್ ಹಾಕಿದರೆ ಹಣ ನೀಡುವ 830 ಎಟಿಯಂ ಯಂತ್ರಗಳು ಇದ್ದರೂ ಅವುಗಳಲ್ಲಿ ಬಹುತೇಕ ಎಟಿಎಂಗಳಲ್ಲಿ ಹಣವಿಲ್ಲ. ಬಹುಮುಖ್ಯವಾಗಿ ದೊಡ್ಡ ಸಂಖ್ಯೆಯ ಎಟಿಎಂಗಳು ನವೆಂಬರ್ ತಿಂಗಳ 10ನೇ ತಾರೀಖಿನಿಂದ `ನಗದು ಇಲ್ಲ’ ಎಂದು ಬೋರ್ಡ್ ಹಾಕಿ ಬಾಗಿಲು ಮುಚ್ಚಿದವು ಇನ್ನೂ ತೆರೆದಿಲ್ಲ.

ಇವುಗಳಲ್ಲಿ ಬಹುತೇಕ ಎಟಿಎಂಗಳು ರಾಜ್ಯದ ಮತ್ತು ಅಂತಾರಾಜ್ಯ ಸಹಕಾರಿ ಬ್ಯಾಂಕುಗಳಿಗೆ ಸೇರಿದವು ಮತ್ತು ಸಣ್ಣ ಪ್ರಮಾಣದ ಶೆಡ್ಯೂಲ್ ಬ್ಯಾಂಕುಗಳಿಗೆ ಸೇರಿದವುಗಳಾಗಿವೆ. ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲೀಡ್ ಬ್ಯಾಂಕ್ ಸಿಂಡಿಕೇಟ್ ಹೊರತುಪಡಿಸಿದರೆ ಇನ್ನುಳಿದ ಬ್ಯಾಂಕುಗಳ ಎಟಿಎಂಗಳಲ್ಲಿ ಹಣದ ಕೊರತೆ ಈಗಲೂ ಇದೆ. ಬಹುತೇಕ ಎಟಿಎಂಗಳು ಕೇವಲ ಎರಡು ಸಾವಿರ ರೂಪಾಯಿಯ ಒಂದು ನೋಟು ಮಾತ್ರ ವಿತರಿಸುತ್ತಿವೆ.

ಸಂಸದ ಕಟೀಲ್ ಮುಂದಿನ ಬಾರಿ ಸಭೆ ನಡೆಸಿದಾಗ ಖಾಸಗಿ ವಲಯದ ಆಕ್ಸಿಸ್, ಐಸಿಐಸಿಐ, ಯೆಸ್ ಬ್ಯಾಂಕುಗಳಲ್ಲಿ ನಗದು ಸಮಸ್ಯೆ ಇಲ್ಲದಿರುವಾಗ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಇಂತಹ ಕೊರತೆ ಇರಲು ಕಾರಣ ಏನು ಎಂಬುದನ್ನು ಹಿರಿಯ ಅಧಿಕಾರಿಗಳಿಂದ ತಿಳಿದುಕೊಳ್ಳುವ ಅಗತ್ಯ ಇದೆ.

ಅದೇ ರೀತಿ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ ಸೇರಿದಂತೆ ಬಹುತೇಕ ಸಹಕಾರಿ ಬ್ಯಾಂಕುಗಳ ಶಾಖೆ ಮತ್ತು ಎಟಿಎಂಗಳಲ್ಲಿ ಹಣದ ವಹಿವಾಟೇ ಇಲ್ಲದಿರುವುದು ಇಂತಹ ಹಣಕಾಸು ಸಂಸ್ಥೆಗಳನ್ನು ನಿರ್ನಾಮ ಮಾಡುವ ಹುನ್ನಾರವೇ ಎಂಬುದನ್ನು ಸಂಸದರು ಅರಿತುಕೊಳ್ಳಬೇಕಾಗಿದೆ.