ಕಟೀಲು ಕಲಾವಿದರ ಕ್ಷಮೆಯಾಚನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಸಂಚಲನವನ್ನು ಸೃಷ್ಟಿಸಿದ್ದ ಕಲಾವಿದರ ಗೇಟ್‍ಪಾಸ್ ಪ್ರಕರಣ ಇದೀಗ ಅವರು ಕ್ಷಮಾಪಣೆ ಕೋರುವ ಹಂತಕ್ಕೆ ಬಂದು ತಲುಪಿದೆ. ಮಾಧ್ಯಮದ ಮುಂದೆ ಇದೀಗ ತಮ್ಮ ಅಳಲು ತೋಡಿಕೊಂಡಿರುವ 5ನೇ ಮೇಳದ 7 ಮಂದಿ ಕಲಾವಿದರು ಬಹಿರಂಗವಾಗಿ ಕ್ಷಮಾಪಣೆ ಕೋರಿಕೊಂಡಿರುವುದಲ್ಲದೇ, ತಾವು ಮಾಡಿದ ತಪ್ಪನ್ನು ಮನ್ನಿಸಿ ತಮ್ಮನ್ನು ಮತ್ತೆ ಮೇಳಕ್ಕೆ ಸೇರ್ಪಡೆ ಮಾಡುವಂತೆ ಕೋರಿಕೊಂಡಿದ್ದಾರೆ.

ಕಲಾವಿದರ ಪರವಾಗಿ ಬಹಿರಂಗ ಕ್ಷಮೆಯನ್ನು ಯಾಚಿಸಿರುವ ಅಮ್ಮುಂಜೆ ಮೋಹನ್ ಕುಮಾರ್ ಮತ್ತು ಮಾಧವ ಕೊಳತ್ತಮಜಲು ಈ ಹೇಳಿಕೆಯನ್ನು ಹೊರಡಿಸಿದ್ದಾರೆ.ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರದ ಪ್ರಮುಖ ಹೈಲೈಟ್ಸ್ ಹೀಗಿದೆ…

  • ಪಟ್ಲ ಸತೀಶ್ ಶೆಟ್ಟಿ ಅವರನ್ನು ಇನ್ನೊಂದು ಮೇಳಕ್ಕೆ ವರ್ಗಾವಣೆ ಮಾಡಿರುವುದನ್ನಷ್ಟೇ ನಾವು ಮೇಳದ 23 ಮಂದಿ ಕಲಾವಿದರು ಸಭೆ ಸೇರಿ ಆಕ್ಷೇಪಿಸಿದ್ದೇವೆ. ನಮ್ಮೆಲ್ಲರಿಗೆ ತರಬೇತಿ ನೀಡಿ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಭಾಗವತರನ್ನು ಏಕಾಏಕಿ ವರ್ಗಾವಣೆಗೊಳಿಸಿರುವುದು ನಮಗೆ ನೋವು ಕೊಟ್ಟಿದೆ. ಇದರಿಂದ ತರಾತುರಿಯಲ್ಲಿ ನಾವು ನಿರ್ಧಾರ ಕೈಗೊಂಡಿದ್ದೆವು.
  • ಮೇಳದಲ್ಲಿ ಆರಂಭದಿಂದಲೂ ನಮ್ಮ ಜೊತೆಗೆ ಸೇವೆ ಸಲ್ಲಿಸುತ್ತಿರುವ

ಭಾಗವತರನ್ನು ವರ್ಗಾವಣೆ ಮಾಡುವುದಕ್ಕೆ ನಮ್ಮ ಆಕ್ಷೇಪ ಸೀಮಿತವಾಗಿತ್ತು. ಮನವಿಗೆ ಸ್ಪಂದಿಸಿ ಯಜಮಾನರು ವರ್ಗಾವಣೆ ಕೈಬಿಡುತ್ತಾರೆ ಎನ್ನುವ ಭಾವನೆ ನಮ್ಮದಾಗಿತ್ತು. ಆದರೆ ಕೆಲವರು ಯಜಮಾನರ ವಿರುದ್ಧ ನಮ್ಮನ್ನು ಎತ್ತಿಕಟ್ಟಿ ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ.

  • ಅಪಪ್ರಚಾರದಿಂದ ನಮ್ಮ ಮನಸ್ಸು ನೊಂದಿದೆ. ಎಲ್ಲಾ ಗೊಂದಲಗಳಿಗೆ ನಾವೇ ಕಾರಣ ಎನ್ನುವ ನೆಲೆಯಲ್ಲಿ ಕ್ಷಮೆ ಯಾಚನೆ ಮಾಡುತ್ತಿದ್ದೇವೆ. ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಅವರ ಯಜಮಾನಿಕೆಯಲ್ಲಿ ಕಲಾವಿದರೆಲ್ಲರಿಗೂ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.
  • ನಮಗೆ ಕಟೀಲು ದೇವಿಯ ಎಲ್ಲಾ ಮೇಳಗಳೂ ಒಂದೇ. ನಾವು ಯಾವುದೇ ಮೇಳದಲ್ಲಿ ಭಾಗವಹಿಸಲು ಸಿದ್ಧ.
  • ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟವಾಗಿರುವ ಮಾಹಿತಿ ಸಂಪೂರ್ಣ ಸುಳ್ಳು. ಇಂತಹ ಅವಿವೇಕದ ಮಾತುಗಳನ್ನು ನಾವು ಆಡಿಲ್ಲ ಎಂದು ಪ್ರಮಾಣ ಮಾಡಿ ಹೇಳುತ್ತೇವೆ.
  • 5ನೇ ಮೇಳ ಸ್ಥಗಿತಗೊಳ್ಳಲಿ ಎಂದು ನಾವು ಹೇಳಿದ್ದೇವೆ ಎಂಬುದು ಸುಳ್ಳು. ಯಾವುದೇ ಕಲಾವಿದರಿಗೂ ನಾವು ಒತ್ತಡ ಹಾಕಿಲ್ಲ.