ರೈಲ್ವೇ ಅಧಿಕಾರಿಗಳು ದಾಖಲಿಸಿದ ಮೊಕದ್ದಮೆ ವಾಪಸ್ ಪಡೆಯಲು ಕಾರವಾರಿಗರ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಗೋವಾ ರಾಜ್ಯಕ್ಕೆ ತೆರಳುವ ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದರಿಂದ ತೊಂದರೆಗೊಳಗಾದ ಪ್ರಯಾಣಿಕರು ರೈಲ್ವೇ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ರೈಲ್ವೇ ಅಧಿಕಾರಿಗಳು ದಾಖಲಿಸಿದ ಪ್ರಕರಣವನ್ನು ವಾಪಸ್ ಪಡೆಯುವಂತೆ ಕಾರವಾರಿಗರು ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದ್ದಾರೆ.

“ಗೋವಾ ರಾಜ್ಯಕ್ಕೆ ತೆರಳುವ ಪ್ಯಾಸೆಂಜರ್ ರೈಲು ಮಾರ್ಚ್ 27ರಂದು ಬೆಳಗ್ಗೆ 6.15ರ ಸಮಯದಲ್ಲಿ ಮುಡಗೇರಿ ಬಳಿ ತಾಂತ್ರಿಕ ಸಮಸ್ಯೆಯಿಂದ ಕೆಟ್ಟು ನಿಂತಿತ್ತು. ಇದರಿಂದ ಪ್ರತಿನಿತ್ಯ ಉದ್ಯೋಗಕ್ಕಾಗಿ ಗೋವಾಕ್ಕೆ ತೆರಳುವ ನೂರಾರು ಪ್ರಯಾಣಿಕರಿಗೆ ತೊಂದರೆಯಾಗಿತ್ತು. ತಾಂತ್ರಿಕ ಸಮಸ್ಯೆ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ 10 ವರ್ಷಗಳಲ್ಲಿ ಬೇಕಾದಷ್ಟು ಸಲ ಇದೇ ರೀತಿ ಆಗಿದೆ. ಹಾಗಾಗಿ ಪ್ರಯಾಣಿಕರು ಪ್ರತಿಭಟನೆ ನಡೆಸಿ, ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಬರುವಂತೆ ಒತ್ತಾಯಿಸಿದರು. ಆದರೆ ರೈಲ್ವೇ ಹಿರಿಯ ಅಧಿಕಾರಿಗಳು ಬರದಿದ್ದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಕಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಂತ್ರಿಕ ತೊಂದರೆಯಿಂದ ಸುಮಾರು 2 ತಾಸುಗಳ ಕಾಲ ರೈಲು ಓಡಾಟ ಸ್ಥಗಿತಗೊಂಡಿತ್ತು. ಆದರೆ ಸ್ಥಳದಲ್ಲಿದ್ದ ರೈಲ್ವೇ ಅಧಿಕಾರಿಗಳು ರೈಲು ಓಡಾಟಕ್ಕೆ ಸಾರ್ವಜನಿಕರು ಅಡ್ಡಿಪಡಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಉದ್ದೇಶಪೂರ್ವಕವಾಗಿ ರೈಲ್ವೇ ಅಧಿಕಾರಿಗಳು 5 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮದಲ್ಲದ ತಪ್ಪಿಗೆ ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ. ರೈಲು ರೋಖೋ ಮಾಡಿದ್ದಾರೆ ಎಂದು ಸುಳ್ಳು ವರದಿ ನೀಡಲಾಗಿದೆ. ವಿನಾಕಾರಣ ಸಾರ್ವಜನಿಕರ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಪ್ರಕರಣವನ್ನು ವಾಪಸ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.