ಕಾರವಾರ ಪ್ರವಾಸಿಗರಿಗೆ ಸಮೀಪದಿಂದ ಡಾಲ್ಫಿನ್ ನೋಡುವ ಅವಕಾಶ ಲಭ್ಯ

ನಮ್ಮ ಪ್ರತಿನಿಧಿ ವರದಿ

ಕಾರವಾರ : ತಾಲೂಕಿನ ಕೂರ್ಮಗಡ ದ್ವೀಪದ ಸುತ್ತಲೂ ಅಪಾರ ಸಂಖ್ಯೆಯಲ್ಲಿರುವ ಅಪರೂಪದ ಡಾಲ್ಫಿನ್ನುಗಳನ್ನು ಅತ್ಯಂತ ಸಮೀಪದಿಂದ ನೋಡುವ ಅವಕಾಶ ಇದೀಗ ಪ್ರವಾಸಿಗರಿಗೆ ಲಭಿಸಿದೆ.

ಕಾರವಾರ ಕಡಲತೀರದಿಂದ ಡಾಲ್ಫಿನ್ ರೈಡ್ ಬೋಟಿಂಗ್ ಸೌಲಭ್ಯವನ್ನು ಬುಧವಾರ ಆರಂಭಿಸಲಾಗಿದ್ದು, ಆರಂಭಿಕ ಹಂತದಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಬೋಟಿಂಗ್ ಸಮಯ ನಿಗದಿಪಡಿಸಲಾಗಿದೆ.

“ಗೋವಾ ಕಡಲತೀರದಲ್ಲಿ ಡಾಲ್ಫಿನ್ ವೀಕ್ಷಣೆ ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ. ಗೋವಾದ ಕಾಣಕೊಣ ಕಡಲತೀರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಡಾಲ್ಫಿನ್ನುಗಳು ಕಾರವಾರ ಕೂರ್ಮಗಡ ಸುತ್ತಮುತ್ತ ಕಾಣಸಿಗುತ್ತವೆ. ಡಾಲ್ಫಿನ್ ವೀಕ್ಷಣೆ ನಮ್ಮ ರಾಜ್ಯದಲ್ಲಿ ಹೆಚ್ಚು ಪ್ರಚಲಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಕಾರವಾರದಲ್ಲಿ ಡಾಲ್ಫಿನ್ ವೀಕ್ಷಣೆಗೆ ಬೋಟಿಂಗ್ ಆರಂಭಿಸಲಾಗಿದೆ” ಎಂದು ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನ ತಿಳಿಸಿದರು.

“ಸುಮಾರು ಒಂದು ತಾಸು ಕಾಲದ ಬೋಟ್ ಯಾನ ಇದಾಗಿದೆ. ಕೂರ್ಮಗಡ ದ್ವೀಪ, ಕಾಳಿ ಸೇತುವೆಯ ಮನಮೋಹಕ ದೃಶ್ಯ, ದೂರದಿಂದ ಕಾಣುವ ಲೈಟ್ ಹೌಸ್, ಕಾರವಾರ ನಗರವನ್ನು ಆವರಿಸಿರು=ವ ಗುಡ್ಡ-ಬೆಟ್ಟಗಳು, ವಿಶಾಲ ನೀಲ ಸಮುದ್ರ, ಕೆಲವೆಡೆ ಅಪ್ಪಳಿಸುವ ಅಲೆಗಳು, ನೀರಿನ ಮೇಲೆ ಫಳಫಳನೇ ಹೊಳೆಯುವ ಸೂರ್ಯ ಕಿರಣಗಳು, ನೀರಿನಲ್ಲಿ ಆಗಿಂದಾಗ್ಗೆ ಹಾರುವ ಸಣ್ಣಪುಟ್ಟ ಮೀನುಗಳು, ಮೀನುಗಳನ್ನು ಬೇಟೆಯಾಡುವ ಕಡಲಹಕ್ಕಿಗಳು ಬೋಟ್ ಯಾನಿಗಳನ್ನು ಮುದಗೊಳಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ಷಣಾರ್ಧದಲ್ಲಿ ನೀರಿನಿಂದ ಮೇಲೆದ್ದು ಹಾರಿ ಕಣ್ಣುಮುಚ್ಚಾಲೆಯಾಡುವ ಡಾಲ್ಫಿನ್ನುಗಳು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತವೆ. ಈ ಭಾಗದಲ್ಲಿ ಹಲವಾರು ಡಾಲ್ಫಿನ್ನುಗಳಿದ್ದು ಕನಿಷ್ಟ ಐದಾರು ಡಾಲ್ಫಿನ್ನುಗಳು ಪ್ರವಾಸಿಗರ ನೋಟಕ್ಕೆ ಲಭಿಸುತ್ತವೆ” ಎಂದು ತಿಳಿಸಿದರು.

“ಪ್ರಸ್ತುತ ಬೆಳಿಗ್ಗೆ 7 ಗಂಟೆಗೆ ಮಾತ್ರ ಡಾಲ್ಫಿನ್ ವೀಕ್ಷಣೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಬೇಡಿಕೆಯನ್ನು ಗಮನಿಸಿ ಬೋಟಿಂಗ್ ಹೆಚ್ಚಳ ಮಾಡಲಾಗುವುದು. ಪ್ರವಾಸಿಗರಿಗಾಗಿ ಈಗಾಗಲೇ ಕಡಲತೀರದಲ್ಲಿ ವಿವಿಧ ಜಲಸಾಹಸ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಕಾರವಾರ ಕಡಲತಡಿಯ ಸುತ್ತಮುತ್ತಲಿನ ದ್ವೀಪಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ವೀಕ್ಷಣೆಗೆ ಸಹ ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗುವುದು” ಎಂದು ಜಲಸಾಹಸ ಕ್ರೀಡೆಗಳನ್ನು ಆಯೋಜಿಸುತ್ತಿರುವ ಗಣಪತಿ ಉಳ್ವೇಕರ ತಿಳಿಸಿದರು.