ಜೂನ್ 1ರಿಂದ ಕಾರವಾರ ಎಕ್ಸ್ಪ್ರೆಸ್ ಶ್ರವಣಬೆಳಗೊಳ ಮುಖಾಂತರ ಹೊಸ ರೈಲು ಮಾರ್ಗದಲ್ಲಿ ಸಂಚಾರ

ಮಂಗಳೂರು :  ಯಶವಂತಪುರ-ಕಾರವಾರ ಹಗಲು ರೈಲು ಹೊಸದಾಗಿ ಕಾರ್ಯಾರಂಭಗೊಂಡಿರುವ ಬೆಂಗಳೂರು-ಹಾಸನ ರೈಲು ಮಾರ್ಗದಲ್ಲಿ ಜೂನ್ 1ರಿಂದ ಸಂಚರಿಸಲಿದೆ. ಪ್ರಸ್ತುತ ಈ ರೈಲು ತುಮಕೂರು ಹಾಗೂ ಅರಸೀಕೆರೆ ಮುಖಾಂತರ 207 ಕಿ ಮೀ ದೂರ ಕ್ರಮಿಸಿ  ಹಾಸನ ತಲುಪುತ್ತಿದೆ.

ನೈಋತ್ಯ ರೈಲ್ವೆ  ವಾರದಲ್ಲಿ ಮೂರು ಬಾರಿ ಸಂಚರಿಸುವ ಈ ರೈಲನ್ನು ಶ್ರವಣಬೆಳಗೊಳ ಮುಖಾಂತರ ಸಂಚರಿಸಲು ಕ್ರಮ ಕೈಗೊಂಡಾಗ ಪ್ರಯಾಣದ ದೂರ ಕೂಡ 178 ಕಿ ಮೀ ಇಳಿದಂತಾಗುವುದು. ಕಾರವಾರ ರೈಲನ್ನು ಅತಿ ಹತ್ತಿರದ ರೈಲು ಮಾರ್ಗದ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳುವ ಬಗೆಗಿನ ಪ್ರಸ್ತಾಪವನ್ನು ನೈಋತ್ಯ ರೈಲ್ವೆಯ ವಿಭಾಗೀಯ ರೈಲ್ವೆ ಬಳಕೆದಾರರ  ಸಲಹಾ ಸಮಿತಿ ಒಪ್ಪಿದ್ದು

ಇದಕ್ಕೆ ರೈಲ್ವೆ ಮಂಡಳಿ ಕೂಡ ಅನುಮತಿ ನೀಡಿದೆ. ರೈಲಿನ ಹೊಸ ವೇಳಾಪಟ್ಟಿಯನ್ನು ಸದ್ಯದಲ್ಲಿಯೇ ಬಿಡಗುಗಡೆ ಮಾಡಲಾಗುವುದು.

ಕೆಲವೊಂದು ಮೂಲಗಳ ಪ್ರಕಾರ ಯಶವಂತಪುರ-ಕಾರವಾರ ರೈಲಿನ ಮಾರ್ಗ ಬದಲಾವಣೆ ಮೂಲಕ ನೈಋತ್ಯ ರೈಲ್ವೆಯು ಈ ಮಾರ್ಗದಲ್ಲಿ ಇನ್ನೊಂದು ರೈಲು ಸೇವೆಯನ್ನು ಆರಂಭಿಸುವ ಅಗತ್ಯವಿಲ್ಲದಂತೆ ಮಾಡಿದೆ. ಹಿಂದಿನ ರೈಲ್ವೆ ಸಚಿವ ಡಿ ವಿ ಸದಾನಂದ ಗೌಡ ಅವರು ಘೋಷಣೆ ಮಾಡಿದಂತೆ ಮಂಗಳೂರು-ಬೆಂಗಳೂರು ರೈಲು  ಪ್ರತಿ ದಿನ ಓಡಾಟ ಮಾಡುವಂತೆ ಕ್ರಮ ಕೈಗೊಳ್ಳಬೇಕಿತ್ತು.

ಹೀಗಿರುವಾಗ ಈಗಾಗಲೇ ಯಶವಂತಪುರ-ಮಂಗಳೂರು ಜಂಕ್ಷನ್ ರೈಲು ವಾರದಲ್ಲಿ ಮೂರು ಬಾರಿ ಓಡಾಟ ನಡೆಸುವುದರಿಂದ ಹಾಗೂ ಸದ್ಯದಲ್ಲಿಯೇ ಕಾರವಾರ ಎಕ್ಸ್‍ಪ್ರೆಸ್ ಕೂಡ ಇದೇ ಹೊಸ ರೈಲು ಮಾರ್ಗದಲ್ಲಿ ಸಂಚರಿಸುವುದರಿಂದ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ವಾರದಲ್ಲಿ ಆರು ದಿನಗಳ ಕಾಲ ಲಭ್ಯವಾದಂತಾಗುವುದು.