ಕಾರವಾರ -ಬೆಂಗಳೂರು ರೈಲು ಹತ್ತಿರದ ರೂಟಿಗೆ ಆಗ್ರಹಿಸಿ ದಾವೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ಬೆಂಗಳೂರಿನಿಂದ ಕಾರವಾರಕ್ಕೆ ಅತಿ ಹತ್ತಿರದ ರೂಟಿನಲ್ಲಿ ರೈಲು ಸೇವೆ ಒದಗಿಸುವಂತೆ ಮನವಿ ಮಾಡಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟ್ ನಿನ್ನೆ ಹಾಸನ ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮ, ನೈರುತ್ಯ ರೈಲ್ವೇ ಮಹಾ-ಪ್ರಬಂಧಕ ಮತ್ತು ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಲು ಆದೇಶಿಸಿತು.

ಈಗ ಬೆಂಗಳೂರಿನಿಂದ ಕಾರವಾರ ತಲುಪಲು 18 ತಾಸು ಬೇಕಾಗುತ್ತಿದ್ದು, ಈ ಅಂತರದಲ್ಲಿ ಇದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುವ ಪ್ರತ್ಯೇಕ ರೈಲೊಂದರ ಸೇವೆ ಆರಂಭಿಸಬೇಕೆಂದು ದೂರುದಾರ ಸಂಜಯ್ ರೇವಣ್ಕರ್ ಮನವಿ ಮಾಡಿದ್ದಾರೆ.

ಈಗ ಕಾರವಾರ ತಲುಪುವ ರೈಲು ರಾಮನಗರಂ, ಮೈಸೂರು, ಹಾಸನ ಮಾರ್ಗವಾಗಿ ಸುತ್ತುಬಳಸಿ ಸಂಚರಿಸುತ್ತಿದೆ. ಇದರ ಬದಲಾಗಿ ಕಾರವಾರಕ್ಕೆ ಕುಣಿಗಲ್, ಹಾಸನ, ಕಂಕನಾಡಿ, ಉಡುಪಿ ಮತ್ತು ಭಟ್ಕಳವಾಗಿ ಪ್ರತ್ಯೇಕ ರೈಲು ಸೇವೆ ಒದಗಿಸಬೇಕೆಂದು ಅರು ಮನವಿ ಮಾಡಿದ್ದಾರೆ.

ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ರೂಟಿನಲ್ಲಿ ನಾಲ್ಕು ರೈಲು ಮಂಜೂರು ಮಾಡಲಾಗಿದೆ. ಆದರೆ ರೈಲ್ವೇ ಅಧಿಕಾರಿಗಳು ಕಾರವಾರಕ್ಕೆ ಪ್ರತ್ಯೇಕ ರೈಲು ಸೇವೆ ಆರಂಭಿಸಲು ನಿರಾಕರಿಸುತ್ತಿದ್ದಾರೆಂದು ಸಂಜಯ್ ದೂರಿದ್ದಾರೆ.

ರೈಲ್ವೇ ಸಚಿವರು ಪ್ರತ್ಯೇಕ ರೂಟಿನ ಬಗ್ಗೆ ಆಸಕ್ತಿ ತೋರಿದ್ದರೂ, ರೈಲ್ವೇ ಅಧಿಕಾರಿಗಳು ಮಾತ್ರ ಘಾಟಿ ಪ್ರದೇಶದ ನೆವವೊಡ್ಡುತ್ತಿದ್ದಾರೆ ಎಂದಿದ್ದಾರೆ. ಮುಖ್ಯ ನ್ಯಾಯಮೂರ್ತಿ ಮುಖರ್ಜಿ ನೇತೃತ್ವದ ನ್ಯಾಯಪೀಠದೆದುರು ಈ ಅರ್ಜಿ ವಿಚಾರಣೆಯಲ್ಲಿದೆ.