ಪಂ ಉಪಾಧ್ಯಕ್ಷನ ಕಡಿದು ಕೊಂದರು

ಕರೋಪಾಡಿ ಗ್ರಾ ಪಂ ಕಚೇರಿಯಲ್ಲಿ ಹಾಡಹಗಲು ಮುಸುಕುಧಾರಿಗಳ ಕೃತ್ಯ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಎರಡು ಬೈಕುಗಳಲ್ಲಿ ಬಂದ ನಾಲ್ವರು ಮುಸುಕುಧಾರಿ ಯುವಕರು ಹಾಡಹಗಲೇ ಕಚೇರಿಗೆ ನುಗ್ಗಿ ಪಂ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಮೇಲೆ ತಲವಾರುಗಳಿಂದ ಭೀಕರವಾಗಿ ಕಡಿದು ಕೊಲೆಗೈದ ಆತಂಕಕಾರಿ ಘಟನೆ ಕರೋಪಾಡಿ ಗ್ರಾಮದಲ್ಲಿ ನಡೆದಿದೆ.

ಮರಳು ಮಾಫಿಯಾ ಹಾಗೂ ಕನ್ಯಾನ ಪರಿಸರದ ಖತರ್‍ನಾಕ್ ಕ್ರಿಮಿನಲ್ ಗುಂಪುಗಳ ಧ್ವೇಷಕ್ಕೆ ಜಲೀಲ್ ಬಲಿಯಾಗಿರುವುದು ಸ್ಪಷ್ಟಗೊಂಡಿದ್ದು ಗ್ರಾಮದೆಲ್ಲೆಡೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಹಿರಿಯ ಕಾಂಗ್ರೆಸ್ ಮುಖಂಡ ಹಾಜಿ ಉಸ್ಮಾನ್ ಕರೋಪಾಡಿಯವರ ಪುತ್ರ ಅಬ್ದುಲ್ ಜಲೀಲ್ (42) ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿಯಾದ ಯುವ ರಾಜಕಾರಣಿ. ಗುರುವಾರ ಬೆಳಗ್ಗೆ ಎಂದಿನಂತೆ ಜಲೀಲ್ ಪಂ ಕಚೇರಿಯಲ್ಲಿದ್ದ ಸಂದರ್ಭ 11.35ರ ಸುಮಾರಿಗೆ ಎರಡು ಬೈಕುಗಳಲ್ಲಿ ನಾಲ್ವರು ಯುವಕರು ಬಂದಿದ್ದರೆನ್ನಲಾಗಿದೆ. ಹೆಲ್ಮೆಟ್ ಹಾಗೂ ಮುಸುಕು ಹಾಕಿಕೊಂಡಿದ್ದ ಮೂವರು ಕಚೇರಿಯೊಳಗೆ ನುಗ್ಗಿದ್ದರೆ ಮತ್ತೊಬ್ಬಾತ ಬಾಗಿಲ ಬಳಿ ತಲವಾರು ಹಿಡಿದು ನಿಂತಿದ್ದನೆನ್ನಲಾಗಿದೆ. ಕಚೇರಿಯೊಳಗಿಂದ ಬೊಬ್ಬೆ ಕೇಳಿಸಿಕೊಂಡ ಪಕ್ಕದ ಕೊಠಡಿಯಲ್ಲಿದ್ದ ಪಿಡಿಒ ಮತ್ತು ಸಿಬ್ಬಂದಿಗಳು ಹೊರಗಡೆ ಬರುತ್ತಿದ್ದಂತೆ ತಮ್ಮ ಕೆಲಸ ಮುಗಿಸಿ ತಲವಾರು ಝಳಪಿಸುತ್ತಾ ಕಾಲ್ಕಿತ್ತ ಹಂತಕರು ಕಚೇರಿ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕುಗಳಲ್ಲಿ ಪರಾರಿಯಾಗಿದ್ದಾರೆ.

ಇದೇ ಸಮಯ ರಸ್ತೆಯಲ್ಲಿದ್ದ ರಝಾಕ್ ಎಂಬಾತ ದುಷ್ಕರ್ಮಿಗಳ ಮೇಲೆ ಕಲ್ಲೆಸೆಯುತ್ತಿದ್ದಂತೆ ಹಂತಕರಲ್ಲೊಬ್ಬ ತನ್ನ ಹೆಲ್ಮೆಟ್ಟನ್ನು ಆತನ ಮೇಲೆ ಎಸೆದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ನರಳಾಡುತ್ತಿದ್ದ ಗಾಯಾಳುವನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ.