`ಕಲ್ಲಡ್ಕ ಭಟ್ ಶಾಲೆಗೆ ನೀಡಿದ ಅನುದಾನ ಮುಜರಾಯಿ ಇಲಾಖೆ ಹಿಂಪಡೆಯಲಿದೆ’

ರಮಾನಾಥ ರೈ ಘೋಷಣೆ

ಮಡಿಕೇರಿ : “ನಿಯಮಗಳನ್ನು ಉಲ್ಲಂಘಿಸಿ ಬಂಟ್ವಾಳ ತಾಲೂಕಿನ ಎರಡು ಶಾಲೆಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವತಿಯಿಂದ ಬಿಡುಗಡೆಯಾದ ಅನುದಾನವನ್ನು ಹಿಂದಕ್ಕೆ ಪಡೆಯಲು ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳುವುದು” ಎಂದು ಪರಿಸರ ಸಚಿವ ಬಿ ರಮಾನಾಥ ರೈ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಶುಕ್ರವಾರ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಸುದ್ದಿಗಾರರೊಡನೆ ಮಾತನಾಡುತ್ತಿದ್ದರು. “ರಾಜಕೀಯ ದ್ವೇಷದ ಕ್ರಮವಾಗಿ ಎರಡೂ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಅನುದಾನವನ್ನು ಹಿಂಪಡೆಯಲಾಗಿದೆ ಎಂಬ ಆರೋಪ ಸುಳ್ಳು. ಹಿಂದೂ ಧಾರ್ಮಿಕ ದತ್ತಿ ಕಾಯಿದೆ 1997 ಹಾಗೂ 2002 ಅನ್ವಯ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇವಳಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದತ್ತು ಪಡೆಯುವ ಅವಕಾಶವಿಲ್ಲ. ಇಲ್ಲಿಯ ತನಕ ಈ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿರುವ ಅನುದಾನವನ್ನು ಹಿಂದಕ್ಕೆ ಪಡೆದುಕೊಂಡು ಆ ಹಣವನ್ನು ರಾಜ್ಯದ ಸಣ್ಣ ದೇವಳಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು” ಎಂದು ರೈ ತಿಳಿಸಿದರು.

“ಅನುದಾನ ಹಿಂದಕ್ಕೆ ಪಡೆಯಲಾಗಿರುವ ಎರಡು ಶಾಲೆಗಳಲ್ಲಿ ಒಂದು ಶಾಲೆಯ ಸಂಚಾಲಕರಾಗಿರುವ ಕಲ್ಲಡ್ಕ ಪ್ರಭಾಕರ್ ಭಟ್  ಅವರು ಸಾಧಾರಣ ವ್ಯಕ್ತಿಯಲ್ಲ. ಅವರು ಆರ್ಥಿಕವಾಗಿ ಸದೃಢರಾಗಿದ್ದಾರೆ. ರಾಜ್ಯ ಸರಕಾರ ರಾಜ್ಯದ ಸಾವಿರಾರು ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವಾಗ ಈ ಎರಡು ಶಾಲೆಗಳಿಗೆ ಊಟ ನೀಡುವುದು ಏಕೆ ಸಾಧ್ಯವಿಲ್ಲ ?” ಎಂದವರು ಪ್ರಶ್ನಿಸಿದರು.