ಭಿನ್ನಚೇತನ ಮಗನನ್ನು ಜೀವಂತ ಹೂಳಲೆತ್ನಿಸಿದ ಮಹಿಳೆಗೆ ಜಾಮೀನು

ಬೆಂಗಳೂರು : ವಿಕಲಚೇತನನಾಗಿರುವ ತನ್ನ ಹೆತ್ತ ಮಗನನ್ನೇ ತೋಡಿನಲ್ಲಿ ಹೂತು ಕೊಲ್ಲಲೆತ್ನಿಸಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚಿಪುರ  ಗ್ರಾಮವೊಂದರ ಮಹಿಳೆಯೊಬ್ಬಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಘಟನೆ ಸೆಪ್ಟೆಂಬರ್ 11ರಂದು ನಡೆದಿದ್ದು ಆರೋಪಿ ಜ್ಯೋತಿಗೆ ವಿಕಲ ಚೇತನನಾಗಿರುವ ಹಾಗೂ ಸರಿಯಾಗಿ ನಡೆದಾಡಲೂ ಅಸಮರ್ಥನಾಗಿದ್ದ ತನ್ನ ಪುತ್ರನನ್ನು ಸಾಕುವುದು  ಬಹಳ ಕಷ್ಟಕರವೆಂದೆನಿಸಿದ ಕಾರಣ ಆತನನ್ನು ತೋಡೊಂದಕ್ಕೆ ನೂಕಿ ಅದಕ್ಕೆ ಕಲ್ಲುಗಳನ್ನು ಹಾಕಿ ಮಗನನ್ನು ಜೀವಂತ ಹೂಳಲು ಯತ್ನಿಸಿದ್ದಳು. ಆದರೆ ಬಾಲಕನ ಕಿರುಚಾಟವನ್ನು ಕೇಳಿದ ಹತ್ತಿರದಲ್ಲೇ ಇದ್ದ ಕುರಿ ಕಾಯುವವನೊಬ್ಬ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದು ಅವರು ಬಂದು ಬಾಲಕನನ್ನು ರಕ್ಷಿಸಿದ್ದರು. ಇದೀಗ 14 ವರ್ಷದ ಬಾಲಕ ತನ್ನ ಅಜ್ಜಿಯ ಆರೈಕೆಯಲ್ಲಿದ್ದಾನೆ.

ಆರೋಪಿ ಜ್ಯೋತಿ, ಕೂಲಿ ಕೆಲಸಗಾರನಾಗಿರುವ ಶ್ರೀನಿವಾಸ್ ಎಂಬಾತನನ್ನು ವಿವಾಹವಾಗಿದ್ದು ಆತನ ಕುಡಿತದ ವ್ಯಸನದಿಂದಲೂ ಕಂಗೆಟ್ಟಿದ್ದಳೆನ್ನಲಾಗಿದ್ದು  ಕುಟುಂಬ ಆರ್ಥಿಕ ಸಮಸ್ಯೆಯಿಂದಲೂ ಬಳಲುತ್ತಿತ್ತೆನ್ನಲಾಗಿದೆ.

ಬಾಲಕನನ್ನು ಜ್ಯೊತಿಯ ತಾಯಿ ನೋಡಿಕೊಳ್ಳುತ್ತಿದ್ದರು ಹಾಗೂ ಆತನ ಆರೈಕೆಗೆ ರೂ 500 ಅಂಗವಿಕಲರ ಪಿಂಚಣಿ ಪಡೆಯುತ್ತಿದ್ದರು.  ಪಿಂಚಣಿ ಹಣವನ್ನು ತನಗೆ ನೀಡುವಂತೆ ಆಕೆಯನ್ನು ಒತ್ತಾಯಿಸಿದ್ದ ಜ್ಯೋತಿ ಆಕೆ ನಿರಾಕರಿಸಿದಾಗ ಮಗನನ್ನು ಕರೆದುಕೊಂಡು ಹೋಗಿ ಕೊಲೆಗೆ ಯತ್ನಿಸಿದ್ದಳೆನ್ನಲಾಗಿದೆ.