ಭ್ರಷ್ಟರನ್ನು ಶಿಕ್ಷಿಸಲು ಕರ್ನಾಟಕ ವಿಫಲ

ರಾಜ್ಯವನ್ನು ಭ್ರಷ್ಟಾಚಾರ ಮುಕ್ತವಾಗಿಸುವ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಭ್ರಷ್ಟಾಚಾರ ನಿವಾರಣೆಗೆ ಸ್ವತಃ ತಾವೇ ಕಂಟಕವಾಗಿದ್ದಾರೆ.

 

  • ಕೆ ವಿ ಧನಂಜಯ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಅವರ ಸಹಪಾಠಿ ಶಶಿಕಲಾ ಅವರಂತೆಯೇ ಕರ್ನಾಟಕದ ಹಲವಾರು ಶಾಸಕರು, ಸಚಿವರು, ನಗರಸಭಾ ಸದಸ್ಯರು ಕಳೆದ ಒಂದೆರಡು ದಶಕಗಳಲ್ಲಿ ಭ್ರಷ್ಟಾಚಾರದ ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ. ನಮ್ಮ ನಡುವೆಯೇ ಭ್ರಷ್ಟಾಚಾರ ರಾರಾಜಿಸುತ್ತಿರುವುದನ್ನು ಕಾಣುತ್ತಲೇ ಇದ್ದೇವೆ. ಹಾಗಾಗಿ ಶಶಿಕಲಾ ಪ್ರಕರಣದಲ್ಲಿ ಆದಂತೆಯೇ ಕರ್ನಾಟಕದಲ್ಲೂ ಭ್ರಷ್ಟ ರಾಜಕಾರಣಿಗಳಿಗೆ ಕಾನೂನು ಶಿಕ್ಷೆಯಾಗಬೇಕಲ್ಲವೇ ? ಇಂತಹ ಭ್ರಷ್ಟಾಚಾರದ ಪ್ರಕರಣಗಳಲ್ಲಿ ರಾಜ್ಯದ ಪ್ರಾಸಿಕ್ಯೂಷನ್ ಘಟನೆ ನಡೆದ ನಂತರ ಹಲವು ವರ್ಷಗಳ ಕಾಲ ಮೌನ ವಹಿಸಿದ್ದರೂ ಈ ಹಗರಣಗಳನ್ನು ನ್ಯಾಯಾಂಗದ ಕಟಕಟೆಯಲ್ಲಿ ವಿಚಾರಣೆಗೊಳಪಡಿಸಲು ಯಾವುದೇ ನಿರ್ಬಂಧ ಇಲ್ಲ. ಭ್ರಷ್ಟಾಚಾರವೇ ಆಗಲೀ ಇತರ ಯಾವುದೇ ಅಪರಾಧವಾಗಲೀ ಇಂತಿಷ್ಟೇ ಅವಧಿಯೊಳಗಾಗಿ ವಿಚಾರಣೆಗೊಳಪಡಿಸಬೇಕು ಎಂಬ ಸ್ಪಷ್ಟ ನಿಯಮವೇನೂ ಇಲ್ಲ. ಕಳೆದ ಎರಡು ತಿಂಗಳ ಅವಧಿಯಲ್ಲಿ ಹಲವು ಅಧಿಕಾರಿಗಳು, ಸಚಿವರು, ಶಾಸಕರು ಮತ್ತು ಅವರ ಸಹವರ್ತಿಗಳು ಆದಾಯ ತೆರಿಗೆ ಇಲಾಖೆಯ ದಾಳಿಗೊಳಗಾಗಿದ್ದಾರೆ. ಕೋಟ್ಯಂತರ ರೂ ಅಕ್ರಮ ಸಂಪತ್ತು ಪತ್ತೆಯಾಗಿದೆ.  ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಣ ಪೊಲೀಸ್ ವ್ಯವಸ್ಥೆ ಸಮರ್ಪಕವಾಗಿದ್ದಲ್ಲಿ ಆದಾಯ ತೆರಿಗೆ ಅಧಿಕಾರಿಗಳೊಡನೆ ಜಂಟಿಯಾಗಿ ಕಾರ್ಯ ನಿರ್ವಹಿಸಿ ತಪ್ಪಿತಸ್ಥರನ್ನು ಬಂಧಿಸಬಹುದಿತ್ತು.

ಆದರೆ ಸಿದ್ಧರಾಮಯ್ಯ ಸರ್ಕಾರದ ಮೃದು ಧೋರಣೆಯಿಂದ ಇದು ಸಾಧ್ಯವಾಗಿಲ್ಲ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತವಾಗಿಸುವ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಭ್ರಷ್ಟಾಚಾರ ನಿವಾರಣೆಗೆ ಸ್ವತಃ ತಾವೇ ಕಂಟಕವಾಗಿದ್ದಾರೆ. ಲೋಕಾಯುಕ್ತ ಪೊಲೀಸ್ ವಿಭಾಗವನ್ನು ರದ್ದುಪಡಿಸುವ ಮೂಲಕ ಸಿದ್ಧರಾಮಯ್ಯ ಭ್ರಷ್ಟಾಚಾರ ನಿಯಂತ್ರಣ ವ್ಯವಸ್ಥೆಯನ್ನೇ ಶಿಥಿಲಗೊಳಿಸಿದ್ದಾರೆ. ಮುಖ್ಯಮಂತ್ರಿಗಳ ಅದ್ಯತೆಯ ಮೇರೆಗೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತದೆ.

ಈ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಕಾನೂನು ಸಮ್ಮತಿ ಇದೆಯೋ ಇಲ್ಲವೋ ಎಂದು ನಿರ್ಧರಿಸಲು ರಾಜ್ಯ ಹೈಕೋರ್ಟ್ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ಸಾಗುತ್ತಿದೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಸಹವರ್ತಿಗಳನ್ನು ಭ್ರಷ್ಟಾಚಾರ ಪ್ರಕರಣಗಳಲ್ಲಿ ನಿರ್ದೋಷಿ ಎಂದು ತೀರ್ಪು ನೀಡಿತ್ತು. ತನ್ಮೂಲಕ ವಿಶೇಷ ನ್ಯಾಯಾಲಯ ಲಂಚ ನೀಡುವ ಮತ್ತು ಪಡೆಯುವ ಪ್ರವೃತ್ತಿಗೆ ಪರೋಕ್ಷವಾಗಿ ಸಾಂಸ್ಥಿಕ ಸ್ವರೂಪ ನೀಡಿದೆ.

ಗಣಿ ಉದ್ಯಮಿಯೊಬ್ಬರು ಯಡಿಯೂರಪ್ಪ ಸರ್ಕಾರದ ಕೃಪಾಕಟಾಕ್ಷದಿಂದ ಸಾಕಷ್ಟು ಹಣಕಾಸು ಲಾಭ ಪಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿತ್ತು.  ಆದರೆ ಈ ಲಂಚ ಪಡೆದಿರುವ ಪ್ರಕರಣಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿರುವ ವಿಶೇಷ ನ್ಯಾಯಾಲಯ ಆರೋಪಿಗಳಿಗೆ ಮುಕ್ತಿ ನೀಡಿದೆ.

ಈ ಹಗರಣದ ಗಂಭೀರ ಸ್ವರೂಪದ ಹಿನ್ನೆಲೆಯಲ್ಲಿ ವಿಚಾರಣೆ ಸುಪ್ರೀಂ ಕೋರ್ಟಿನಲ್ಲೇ ನಡೆಯಬೇಕು ಎಂದು ರಾಜ್ಯದ ಸಾರ್ವಜನಿಕ ಅಭಿಪ್ರಾಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಹೈಕೋರ್ಟ್ ಹಲವಾರು ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಹೂಡಲಾಗಿದ್ದ ಭ್ರಷ್ಟಾಚಾರದ ಪ್ರಕರಣಗಳನ್ನು ತಳ್ಳಿಹಾಕಿದೆ ಅಥವಾ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ಪಡೆಯುವ ಭ್ರಷ್ಟಾಚಾರದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ದೇಶದ ಇತಿಹಾಸದಲ್ಲೇ ಅಭೂತಪೂರ್ವ ಎನ್ನಬಹುದು.

ಈ ಎಲ್ಲ ಪ್ರಕರಣಗಳಲ್ಲು ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಗಳು ದುರ್ಬಲವಾಗಿದ್ದುದು ಕಾಕತಾಳೀಯವಷ್ಟೆ.  ಆದರೆ ಪ್ರಾಸಿಕ್ಯೂಷನ್ ಈ ಎಲ್ಲ ಪ್ರಕರಣಗಳನ್ನೂ ಸುಪ್ರೀಂಕೋರ್ಟ್ ಅಂಗಳಕ್ಕೆ ಕೊಂಡೊಯ್ಯಲು ಯಾವುದೇ ಅಡ್ಡಿ ಇರುವುದಿಲ್ಲ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಲು ಸಾಕಷ್ಟು ಶ್ರಮಿಸಬೇಕಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳ ಮೂರೂ ಪಕ್ಷಗಳು ಭ್ರಷ್ಟಾಚಾರದ ಕೂಪಗಳಾಗಿರುವ ಸಂದರ್ಭದಲ್ಲಿ ಇದು ನಮ್ಮ ಆದ್ಯತೆಯಾಗಬೇಕಿದೆ.