ಸುಪ್ರೀಂ ಸೀಜೆ, 6 ಜಡ್ಜರಿಗೆ ಸಮನ್ಸ್ ಕಳಿಸಿದ ಕರ್ಣನ್ !

 ಕೊಲ್ಕತ್ತಾ :  ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಬೆಳವಣಿಗೆಯೊಂದರಲ್ಲಿ  ಕೊಲ್ಕತ್ತಾ ಹೈಕೋರ್ಟಿನ ವಿವಾದಿತ  ನ್ಯಾಯಾಧೀಶ ಸಿ ಎಸ್ ಕರ್ಣನ್ ಅವರು  ಗುರುವಾರದಂದು  ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಜೆ ಎಸ್ ಖೇಹರ್ ಮತ್ತು ಆರು ಮಂದಿ  ಇತರ ನ್ಯಾಯಾಧೀಶರುಗಳಿಗೆ ತಮ್ಮ ನ್ಯೂ ಟೌನ್ ನಿವಾಸದಲ್ಲಿ ತಮ್ಮೆದುರು ಎಪ್ರಿಲ್ 24ರೊಳಗಾಗಿ ಹಾಜರಾಗುವಂತೆ ಆದೇಶಿಸಿದ್ದಾರೆ. ದಲಿತರಾದ ತಮ್ಮ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಾಗೂ ಸಾರ್ವಜನಿಕವಾಗಿ ತನ್ನನ್ನು ಅವಮಾನಿಸಿದ್ದಕ್ಕಾಗಿ  ಕರ್ಣನ್ ತಾವು ಈ ಕ್ರಮ ಕೈಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಗುರುವಾರ ಸುದ್ದಿಗಾರರನ್ನು ತಮ್ಮ ಮನೆಗೆ ಆಹ್ವಾನಿಸಿದ ಕರ್ಣನ್ ನಂತರ ಸ್ವಯಂಪ್ರೇರಿತ ಆದೇಶವನ್ನು “ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಹಾಗೂ ಸಾರ್ವಜನಿಕರನ್ನು ರಕ್ಷಿಸಲು” ನೀಡಿದ್ದಾಗಿ ಹೇಳಿಕೊಂಡರು. ದೇಶದ ಅತ್ಯುನ್ನತ ನ್ಯಾಯಾಲಯದ ಅಧಿಕಾರವನ್ನು ಇಲ್ಲಿಯತನಕ ಯಾವುದೇ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ವಿರೋಧಿಸಿದ ಉದಾಹರಣೆಯಿಲ್ಲ.

ಎಲ್ಲಾ ಏಳು ಮಂದಿ ನ್ಯಾಯಾಧೀಶರುಗಳನ್ನು ಕರ್ಣನ್ ಆದೇಶ “ರಾಷ್ಟ್ರೀಯ ಅಪರಾಧಿಗಳು”’ಎಂದು ಬಣ್ಣಿಸಿದೆಯಲ್ಲದೆ ಅವರು ತಮ್ಮ ವಿರುದ್ಧ ಜಾತಿ ತಾರತಮ್ಯ ಮಾಡಿದ್ದು  ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮಾರ್ಚ್ 31ರಂದು ಪ್ರಶ್ನಿಸಿ ತಮ್ಮನ್ನು ಅವಮಾನಿಸಿದ್ದಾಗಿ ಹೇಳಿಕೊಂಡಿದ್ದಾರೆ. “ಆದುದರಿಂದ ಎಲ್ಲಾ ಏಳು ಮಂದಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ವಿರೋಧಿ ಕಾಯಿದೆಯನ್ವಯ ತಪ್ಪಿತಸ್ಥರು” ಎಂದು ಕರ್ಣನ್ ಅವರ 9 ಪುಟಗಳ ಸಹಿ ಹಾಕಿರುವ ಆದೇಶ ಹೇಳಿದೆ.