ಪೊಲೀಸರಿಗೆ ಕರ್ಣನ್ ಚಳ್ಳೆಹಣ್ಣು

ಚೆನ್ನೈ/ ಕುಡ್ಡಲೂರು : ಮೂರು ರಾಜ್ಯಗಳ ಪೊಲೀಸ್ ತಂಡಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕಲ್ಕತ್ತ ಹೈಕೋರ್ಟ್ ನ್ಯಾಯಾಧೀಶ ಕರ್ಣನ್ ಶ್ರೀಕಲಹಸ್ತಿಗೆ ತೆರಳಲಿದ್ದಾರೆಂಬ ಸುದ್ದಿ ಹಬ್ಬಿದ್ದರೂ, ಅವರು (ಜಸ್ಟಿಸ್ ಕರ್ಣನ್) ಚೆನ್ನೈಯಲ್ಲೇ ಇದ್ದು, ತನ್ನ ವಕೀಲರೊಂದಿಗೆ ಮುಂದಿನ ಕ್ರಮದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಬುಧವಾರ ಬೆಳಿಗ್ಗೆ ಜಸ್ಟಿಸ್ ಕರ್ಣನ್ ಚಿಪಕಿನಲ್ಲಿರುವ ರಾಜ್ಯ ಅತಿಥಿಗೃಹ್ದಲ್ಲಿ ತನ್ನ ಸಿಬ್ಬಂದಿಗಳು ಮತ್ತು ಇತರರೊಂದಿಗೆ ಮಾತನಾಡುತ್ತ, “ದೇವರ ಪ್ರಾರ್ಥನೆಗಾಗಿ ಶ್ರೀಕಲಹಸ್ತಿಗೆ ತೆರಳುವೆ” ಎಂದಿದ್ದರು. ಈ ಮಾಹಿತಿ ಪಡೆದ ಚೆನ್ನೈಗೆ ಆಗಮಿಸಿದ್ದ ಪಶ್ಚಿಮ ಬಂಗಾಲ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಪೊಲೀಸರ ತಂಡವು ಶ್ರೀಕಲಹಸ್ತಿಗೆ ತೆರಳಿತ್ತು. ಆದರೆ ಅಲ್ಲಿ ಜಸ್ಟಿಸ್ ಕರ್ಣನ್ ಕುರುಹೇ ಸಿಕ್ಕಿಲ್ಲ. ಹಾಗಾಗಿ ಪೊಲೀಸ್ ತಂಡಗಳು ಬರಿಗೈಯಲ್ಲಿ ಮರಳಿವೆ.