ಕಾರ್ನಾಡು ಸರಣಿ ಕಳ್ಳತನ : ಆರೋಪಿಗಳ ಪತ್ತೆಯಿಲ್ಲ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಾರ್ನಾಡು ಹರಿಹರ ದೇವಸ್ಥಾನದ ಬಳಿಯ ಹರಿಹರ ನಗರದಲ್ಲಿ ಸೋಮವಾರ ರಾತ್ರಿ ನಡೆದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳ್ಳರು ಇದುವರೆಗೂ ಪತ್ತೆಯಾಗಿಲ್ಲ.

ಕಳ್ಳತನ ನಡೆದ ಬಳಿಕ ಮಂಗಳವಾರ ಸಂಜೆ ಮುಲ್ಕಿ ಠಾಣೆಯಲ್ಲಿ ಪೊಲೀಸರು ನಾಮಕೆವಾಸ್ಥೆ ಬೀಟ್ ಸದಸ್ಯರ ಸಭೆ ನಡೆಸಿದ್ದು, ಕೇವಲ 10 ಮಂದಿ ಹಾಜರಿದ್ದು ಗ್ರಾಮಸ್ಥರಿಗೆ ಪೊಲೀಸರ ಮೇಲಿದ್ದ ನಂಬಿಕೆಯನ್ನು ತೋರಿಸಿದೆ ಎಂದು ಗ್ರಾಮಸ್ತರು ವ್ಯಂಗ್ಯವಾಡಿದ್ದಾರೆ. ಕಳ್ಳತನ ನಡೆದಿದ್ದರೂ ಇದುವರೆಗೂ ಹರಿಹರ ನಗರದ ವಾಸಿಗಳು ಕಳೆದ ಕೆಲ ದಿನಗಳ ಹಿಂದೆ ಪ್ರದೇಶದಲ್ಲಿ ತಿರುಗುತ್ತಿದ್ದ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತನಿಖೆಗೆ ಕೋರಿ ಪೊಲೀಸರಿಗೆ ತಿಳಿಸಿದರೂ ಪೊಲೀಸರು ನಿರುತ್ಸಾಹ ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಹೋಬಳಿಯಲ್ಲಿ ಇದುವರೆಗೂ ಭಾರೀ ಮೊತ್ತದ ಕಳ್ಳತನ ಪ್ರಕರಣಗಳು ಹಳ್ಳ ಹಿಡಿಯುತ್ತಿದ್ದು, ಜನರಿಗೆ ಪೊಲೀಸರ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ. ಪಕ್ಷಿಕೆರೆ ಹರಿಪಾದೆ ಕಳ್ಳತನ, ಬಳಕುಂಜೆ ಕಳ್ಳತನ, ಕಿನ್ನಿಗೋಳಿ ಗೋಲ್ಡ್ ಸ್ಮಿತ್ ಸೊಸೈಟಿ ಕಳ್ಳತನ ಪ್ರಕರಣಗಳು ಹಳ್ಳ ಹಿಡಿಯುತ್ತಿದ್ದು, ಮುಲ್ಕಿ ಪೊಲೀಸರಿಗೆ ಇದುವರೆಗೂ ಆರೋಪಿಗಳನ್ನು ಹಿಡಿಯಲು ಆಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಜನಸ್ನೇಹಿ ಪೊಲೀಸ್ ವಿಫಲ ? ಕೆಲ ತಿಂಗಳ ಹಿಂದೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಚನೆಗೊಂಡ ಜನಸ್ನೇಹಿ ಪೊಲೀಸ್ ಸಂಪೂರ್ಣ ವಿಫಲಗೊಂಡಿದ್ದು, ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. `ಜನಸ್ನೇಹಿ ಪೊಲೀಸ್’ ಯಾರಾದರೂ ಊರಿನಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳ ಬಗ್ಗೆ ದೂರು ನೀಡಿದರೆ ದೂರು ನೀಡಿದವರ ಹೆಸರನ್ನು ಗೌಪ್ಯವಿಡಲಾಗುವುದು ಎಂಬದು ಸುಳ್ಳಾಗಿದ್ದು, ದಂಧೆಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವ ಮುಲ್ಕಿ ಪೊಲೀಸ್ ಸಿಬ್ಬಂದಿ ದೂರು ಕೊಟ್ಟವರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.