ತಹಶೀಲ್ದಾರ್ ಇಲ್ಲದೆ ಬಿಕೋ ಎನ್ನುವ ಕಾರ್ನಾಡಿನ ಕಚೇರಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಕಾರ್ನಾಡಿನಲ್ಲಿರುವ ಮುಲ್ಕಿ ವಿಶೇಷ ತಹಶೀಲ್ದಾರ್ ಕಚೇರಿ ಪೂರ್ಣಪ್ರಮಾಣದ ತಹಶೀಲ್ದಾರ್ ಇಲ್ಲದೆ ಬಿಕೋ ಎನ್ನುತ್ತಿದೆ. ತಿಂಗಳ ಹಿಂದೆ ಮುಲ್ಕಿಯ ವಿಶೇಷ ತಹಶೀಲ್ದಾರ್ ಆಗಿದ್ದ ಕಿಶೋರ್ ಕುಮಾರ್ ವರ್ಗಾವಣೆ ಬಳಿಕ ಮುಲ್ಕಿಯಲ್ಲಿ ತಹಶೀಲ್ದಾರ್ ಹುದ್ದೆ ಖಾಲಿ ಬಿದ್ದಿದ್ದು, ಮುಲ್ಕಿ ಹೋಬಳಿಯ ನಾಗರಿಕರು ಭೂಮಿ ಪರಭಾರೆ ಸಹಿತ ಇನ್ನಿತರ ಕೆಲಸಗಳಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ತಹಶಿಲ್ದಾರ್ ಕಚೇರಿಯಲ್ಲಿ ಪೂರ್ಣಪ್ರಮಾಣದ ಸಿಬ್ಬಂದಿ ಕೊರತೆ ಇದ್ದು, ಕಚೇರಿ ಖಾಲಿ ಕಾಣುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆ ಕೇಳಿದರೆ ತರಬೇತಿಗೆ ಮಂಗಳೂರಿಗೆ ಹೋಗಿದ್ದಾರೆ ಎಂಬ ಉತ್ತರ ಸಿಕ್ಕಿದೆ. ಈ ನಡುವೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಹೋಬಳಿಯ ಗ್ರಾಮಸ್ಥರು ಪರದಾಡುವಂತಾಗಿದೆ. ಮುಲ್ಕಿ ಹೋಬಳಿಯ 10 ಗ್ರಾಮಗಳ ಭೂಮಿ ಪರಭಾರೆ ಸಹಿತ ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಹುಡಿಕೊಂಡು ಗ್ರಾಮಸ್ಥರು ಕಚೇರಿಗೆ ಬಂದರೆ ಸಿಬ್ಬಂದಿ ಉಡಾಫೆ ವರ್ತನೆ, ತಹಶೀಲ್ದಾರ್ ಹುದ್ದೆ ಖಾಲಿಯಾಗಿರುವುದನ್ನು ಕಂಡು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕ ಅಭಯಚಂದ್ರ ಕೆಲ ವರ್ಷಗಳಿಂದ ಮುಲ್ಕಿಗೆ ಪೂರ್ಣ ಪ್ರಮಾಣದ ತಹಶೀಲ್ದಾರ್ ಒದಗಿಸಿಕೊಡುತ್ತೇನೆಂದು ನೀಡಿದ ಭರವಸೆ ಸುಳ್ಳಾಗಿದ್ದು, ಇನ್ನೂ ಈಡೇರಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಭಾರ ತಹಶೀಲ್ದಾರ್ ಮುಲ್ಕಿಗೆ ನೂತನ ತಹರ್ಶಿಲ್ದಾರ್ ಆಗಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗಾವರರನ್ನು ದ ಕ ಜಿಲ್ಲಾಧಿಕಾರಿ ನೇಮಕಮಾಡಿದ್ದು, ಪ್ರಭಾರ ಅಧಿಕಾರಿಯಾಗಿ ಮುಂದುವರಿಯಲ್ಲಿದ್ದಾರೆ ಎಂದು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ. ಮೂಲತಃ ಉತ್ತರ ಪ್ರದೇಶ ನಿವಾಸಿಯಾಗಿರುವ ಜ್ಞಾನೇಂದ್ರ ಕುಮಾರ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಹುದ್ದೆ ನಿಭಾಯಿಸಿದ್ದಾರೆ.