ಕಾರ್ನಾಡು ಮನೆಯಲ್ಲಿ ಲಕ್ಷಾಂತರ ಮೌಲ್ಯದ ನಗ-ನಗದು ಕಳ್ಳತನ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಕಾರ್ನಾಡು ಸರಕಾರಿ ಆಸ್ಪತ್ರೆ ಸಮೀಪದಲ್ಲಿರುವ ಮನೆಯೊಂದರಿಂದ ಲಕ್ಷಾಂತರ ಮೌಲ್ಯದ ನಗ-ನಗದು ಕಳವು ಮಾಡಲಾಗಿದೆ.

ಕಾರ್ನಾಡು ಸರಕಾರಿ ಆಸ್ಪತ್ರೆಯ ಎದುರು ಬದಿಯ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಭಾರತ್ ಬೀಡಿ ಗುತ್ತಿಗೆದಾರರಾದ ಎಮ್ ಎ ಖಾದರ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಸುಮಾರು 2 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಹಾಗೂ ಸುಮಾರು 44 ಸಾವಿರ ರೂ ನಗದನ್ನು ಕಳ್ಳತನ ಮಾಡಿದ್ದಾರೆ ಎಂದು ಮುಲ್ಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

ಉದ್ಯಮಿ ಎಮ್ ಎ ಖಾದರ್ ತಮ್ಮ ಕುಟುಂಬದವರೊಂದಿಗೆ ಸಂಬಂಧಿಕರ ಮದುವೆ ಸಮಾರಂಭಕ್ಕೆ ಗುರುವಾರ ಸಂಜೆ ತರಳಿದ್ದು, ಶುಕ್ರವಾರ ಸಂಜೆ ವಾಪಾಸು ಮನೆಗೆ ಬಂದು ನೋಡುವಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಕಳ್ಳರು ಮನೆಯ ಹಿಂಬದಿಯಿಂದ ಮರದ ಕಿಟಿಕಿಯನ್ನು ಕತ್ತರಿಸಿ ಮನೆಯ ಒಳಗಡೆ ಬಂದು ನಾಲ್ಕು ಕೋಣೆಗಳನ್ನು ಜಾಲಾಡಿದ್ದಾರೆ ಹಾಗೂ ರೂಮಿನಲ್ಲಿರುವ ಕಪಾಟಿನ ಬೀಗ ಕತ್ತರಿಸಿ, ಬಟ್ಟೆ ಬರೆಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಎರಡು ಸೂಟ್ಕೇಸುಗಳನ್ನು ಮನೆಯ ಹಿಂಭಾಗಕ್ಕೆ ಕೊಂಡು ಹೋಗಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಎರಡು ಕಪಾಟುಗಳ ಬೀಗ ಒಡೆದು ಕಪಾಟಿನಲ್ಲಿದ್ದ 44 ಸಾವಿರ ನಗದು 2 ರಾಡೋ ವಾಚ್, 7 ಉಂಗುರ, 2 ನಕ್ಲೇಸ್ ಸಹಿತ (ರೂ 2.5 ಲಕ್ಷದ) ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ.ಸ್ಥಳಕ್ಕೆ ಮುಲ್ಕಿ ಪೊಲೀಸರು ಧಾವಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಯಾರೋ ಗೊತ್ತಿದ್ದವರೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಕಾರ್ನಾಡು ಜನನಿಬಿಡ ಪ್ರದೇಶದಲ್ಲಿ ಲಕ್ಷಾಂತರ ರೂ ಮೌಲ್ಯದ ನಗ-ನಗದು ಕಳ್ಳತನವಾಗಿರುವುದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಖಾದರ್ ಮನೆಯ ಕೂಗಳತೆ ದೂರದಲ್ಲಿರುವ ಮರ್ತಪ್ಪ ಎಂಬವರ ಬಟ್ಟೆ ಅಂಗಡಿ ಹಾಗೂ ಅಪ್ಸರಾ ಅಂಗಡಿಯಲ್ಲಿ ಸೀಸಿ ಕ್ಯಾಮರಾ ಅಳವಡಿಸಲಾಗಿದ್ದು, ಮುಲ್ಕಿ ಪೊಲೀಸರು ಪರಿಶೀಲಿಸುತ್ತಿದ್ದಾರೆ.

 

LEAVE A REPLY