ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿ ಫೈನಲಿಗೆ

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

ಪೈಪೆÇೀಟಿಯ ಪ್ರದರ್ಶನ ನಿರೀಕ್ಷಿಸಲಾಗಿದ್ದ ಮುಂಬೈ ಇಂಡಿಯನ್ಸ್  ಹಾಗೂ  ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ  ಎರಡನೇ ಕ್ವಾಲಿಫೈಯರ್ ಪಂದ್ಯ ನೀರಸವಾಗಿ ಕೊನೆಗೊಂಡಿದೆ. ಮದಗಜಗಳ ಹೋರಾಟವೆಂದೇ ಬಿಂಬಿಸಲಾಗಿದ್ದ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಆಟ ನಡೆಯಲೇ ಇಲ್ಲ. ರೋಹಿತ್  ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ತನ್ನ ಬದ್ದವೈರಿ ಎಂದು ತಿಳಿದಿದ್ದ ಕೋಲ್ಕತ್ತಾ ನೈಟ್ ರೈರ್ಡಸ್ ತಂಡದ ನಾಯಕ ಗೌತಮ್ ಗಂಭೀರ್ ಅವರ ಗರ್ವಭಂಗ ಈ ರೀತಿ ನಡೆಯುತ್ತದೆ ಎಂದು ಯಾರೂ ಎನಿಸಿರಲಿಲ್ಲ. ಈ ಮೂಲಕ ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿ ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿದೆ.

ಐಪಿಎಲ್ ಟೂರ್ನಿಯ ಇತಿಹಾಸವನ್ನು ಗಮನಿಸಿದಾಗ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈರ್ಡಸ್ ಬಲಾಢ್ಯ ತಂಡಗಳು.

ಉಭಯತಂಡಗಳು ತಲಾ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿ ಮೆರೆದಾಡಿವೆ. ಹಾಗಾಗಿ  ಉಭಯ ತಂಡಗಳ ನಡುವಣ ಈ ಪಂದ್ಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಇತ್ತು. ಮುಂಬೈ ತಂಡ ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಕ್ವಾಲಿಫೈಯರ್ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ  ರೈಸಿಂಗ್ ಪುಣೆ ಎದುರು ಸೋಲನ್ನು ಕಂಡಿರುವ ಮುಂಬೈ ಇಂಡಿಯನ್ಸ್  ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿತ್ತು. ಆದರೆ, ಶುಕ್ರವಾರ ನಡೆದ ಕೆಕೆಆರ್ ಎದುರಿನ ಈ ಪಂದ್ಯ ಮುಂಬೈ ಇಂಡಿಯನ್ಸ್ ನಿರೀಕ್ಷಿಸಿದಂತೆ ನಡೆದು  ಒನ್ ಸೈಡ್ ಪಂದ್ಯ ಎನಿಸಿತು.

 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್  ತಂಡದ ನಾಯಕ ರೋಹಿತ್ ಶರ್ಮ ಟಾಸ್ ಗೆದ್ದು ಕೋಲ್ಕತ್ತಾ ನೈಟ್ ರೈಡರ್ಸಗೆ ಮೊದಲು ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದರು. ಬ್ಯಾಟಿಂಗ್ ಸ್ನೇಹಿಯಾಗಿದ್ದ ಇಲ್ಲಿನ ಪಿಚ್ ನಿನ್ನೆ ಮಾತ್ರ ಬೌಲರುಗಳತ್ತ ಹೆಚ್ಚು ಒಲವು ತೋರಿಸಿತು. ಹಾಗಾಗಿ ಕೆಕೆಆರ್ ತಂಡದ ದಾಂಡಿಗರಿಗೆ  ರನ್ ಗಳಿಸುವುದಕ್ಕಿಂತ ವಿಕೆಟುಗಳನ್ನು ರಕ್ಷಿಸುವುದೇ ದೊಡ್ಡ ಸವಾಲಾಗಿತ್ತು.

ಮುಂಬೈ ತಂಡದ ವೇಗಿಗಳಾದ  ಜಸ್ಪ್ರೀತ್ ಬುಮ್ರಾ, ಮಿಚೆಲ್ ಜಾನ್ಸನ್, ಲಸಿತ್ ಮಾಲಿಂಗ ಅವರುಗಳ ಮಾರಕ ಬೌಲಿಂಗ್ ಜೊತೆ ಕರ್ಣ್ ಶರ್ಮ ಅವರ ಸ್ಪಿನ್ ದಾಳಿ ಹೆಚ್ಚು ಪರಿಣಾಮಕಾರಿಯಾಗಿತ್ತು. ಕೆಕೆಆರ್ ತಂಡದ ಅಗ್ರ ಕ್ರಮಾಂಕ ಇವರುಗಳ ದಾಳಿಗೆ  ಕಂಗೆಟ್ಟಿತು. ಇಶಾಂಕ್ ಜಗ್ಗಿ (28  ರನ್) ಮತ್ತು ಸೂರ್ಯಕುಮಾರ್ ಯಾದವ್ (31 ರನ್) ಸ್ವಲ್ಪ ತಾಳ್ಮೆಯಿಂದ ಆಡದೇ ಇರುತ್ತಿದ್ದರೆ ಕೆಕೆಆರ್ ತಂಡದ ಸ್ಥಿತಿ ಮತ್ತಷ್ಟು ಶೋಚನೀಯವಾಗುತಿತ್ತು. ಅಂತಿಮವಾಗಿ 107 ರನ್ನುಗಳಿಗೆ ಕೆಕೆಆರ್ ಸರ್ವಪತನಗೊಂಡಿತು.

ಫೈಟಿಂಗ್ ಸ್ಕೋರೇ ಅಲ್ಲದ 108 ರನ್  ಗುರಿಯನ್ನು ಬೆಂಬತ್ತಿದ ಮುಂಬೈ ಇಂಡಿಯನ್ಸಗೂ ಆರಂಭಿಕ ಆಘಾತವನ್ನು ಕೆಕೆಆರ್ ಬೌಲರುಗಳು ಒಡ್ಡಿದರು. ಆರಂಭಿಕರಾದ ಲೆಂಡ್ಲ್ ಸಿಮೊನ್ಸ್, ಪಾರ್ಥಿವ್ ಪಟೇಲ್, ಅಂಬಾಟಿ ರಾಯುಡು ಅವರುಗಳು ಬೇಗನೆ ಔಟಾದರು.  ಪಿಯೂಷ್ ಚಾವ್ಲಾರ ಸ್ಪಿನ್ ಬೌಲಿಂಗ್ ಮುಂಬೈ ತಂಡದ ಸುಲಭ ಗೆಲುವಿಗೆ ಸ್ವಲ್ಪ ತಡೆಯಾಯಿತು. ಆದರೆ, ನಾಯಕ ರೋಹಿತ್ ಶರ್ಮ  (26ರನ್) ಹಾಗೂ ಕೃನಾಲ್ ಪಾಂಡ್ಯಾ ಅವರ ಅಜೇಯ ಆಟ (45 ರನ್)ದಿಂದ ಮುಂಬೈ ಇಂಡಿಯನ್ಸ್  14.3 ಓವರ್ ಗಳಲ್ಲೇ ಗೆಲುವು  ಪಡೆಯಿತು. ಕೆಕೆಆರ್ ತಂಡದ ಮಹಾಪತನಕ್ಕೆ (16 ರನ್ನಿಗೆ 4 ವಿಕೆಟ್) ಕಾರಣರಾದ ಕರ್ಣ ಶರ್ಮ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.