ಮನೆಗೆಲಸದ ಚಾಕರಿಗೆ ಸೌದಿಗೆ ತೆರಳಿ 10 ತಿಂಗಳಿನಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕಾರ್ಕಳದ ವಿಧವೆ ಜೆಸಿಂತಾ

ಪ್ರದಾನಿ ಮೋದಿ ಗಮನ ಸೆಳೆದ ಪ್ರಕರಣ

ಉಡುಪಿ : ಸೌದಿ ಅರೇಬಿಯಾಗೆ ಮನೆಗೆಲಸಕ್ಕೆಂದು ತೆರಳಿ ಅಲ್ಲಿ ಕಳೆದ ಹತ್ತು ತಿಂಗಳುಗಳಿಂದ ಸಂಕಷ್ಟದಲ್ಲಿರುವ  ಕಾರ್ಕಳ ಮೂಲದ 42 ವರ್ಷದ ವಿಧವೆ ಜೆಸಿಂತಾ ಎಂಬವರ ಸಹಾಯಕ್ಕೆ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫೌಂಡೇಶನ್ ಧಾವಿಸಿದೆ.

ಸಂಘಟನೆಯು ಕೊಲ್ಲಿಯಲ್ಲಿರುವ ಕೆಲ ಭಾರತೀಯರ ಸಹಾಯದಿಂದ ಜೆಸಿಂತಾ ಅವರನ್ನು ಪತ್ತೆ ಹಚ್ಚಿದ್ದು  ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ಸಂಪರ್ಕಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗಿದ್ದು ಅವರು ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ, ಜೆಸಿಂತಾ ಭಾರತಕ್ಕೆ ಸುರಕ್ಷಿತವಾಗಿ ಮರಳುವ ಎಲ್ಲಾ ಸಾಧ್ಯತೆಗಳೂ ಇವೆ.

ಕಳೆದ ವರ್ಷ ತನ್ನ ಪತಿಯನ್ನು ಕಳೆದುಕೊಂಡಿದ್ದ ಜೆಸಿಂತಾ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣದ ಅಗತ್ಯವಿರುವುದರಿಂದ ಉದ್ಯೋಗದ ಹುಡುಕಾಟದಲ್ಲಿದ್ದಾಗ ಜೇಮ್ಸ್ ಎಂಬ ಸಬ್ ಏಜಂಟ್ ಆಕೆಯನ್ನು ಸಂಪರ್ಕಿಸಿ ಕತಾರ್ ನಗರದಲ್ಲಿನ ಭಾರತೀಯರೊಬ್ಬರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಮಹಿಳೆಯೊಬ್ಬರನ್ನು ನೇಮಿಸಲು ಯೋಚಿಸುತ್ತಿದ್ದಾರೆಂದು ಹೇಳಿದ್ದನಲ್ಲದೆ ತಿಂಗಳಿಗೆ ರೂ 25,000 ವೇತನದ ಭರವಸೆ ಕೂಡ ನೀಡಿದ್ದ. ಅಂತೆಯೇ ಆಕೆ ಕಳೆದ ಜೂನ್ ತಿಂಗಳಲ್ಲಿ ಕೊಲ್ಲಿಗೆ ತೆರಳಿದ್ದರು. ಆದರೆ ಅಲ್ಲಿ ಆಕೆಯನ್ನು ದಿನದ 16 ಗಂಟೆ ದುಡಿಸಿದಾಗ ಆಕೆಯ ಆರೋಗ್ಯ ಹದಗೆಡಲು ಆರಂಭಿಸಿತ್ತು, ಒಮ್ಮೆ ಆಕೆಯ ತಲೆಗೆ ಕೂಡ ಹೊಡೆಯಲಾಗಿ ಆಕೆ ಸ್ಮøತಿ ತಪ್ಪಿಬಿದಿದ್ದರು. ಎಚ್ಚರವಾದಾಗ ಹೆಬ್ಬೆಟ್ಟಿನಲ್ಲಿ ಶಾಯಿಯ ಗುರುತು ನೋಡಿ  ಯಾವುದೋ ದಾಖಲೆಗೆ ತನ್ನ ಹೆಬ್ಬೆಟ್ಟು ಪಡೆದಿರಬೇಕೆಂಬ ಸಂಶಯ ಕಾಡಿತು.  ಸ್ಥಳೀಯ ಕೆಲ ಭಾರತೀಯರು ಸಹಾಯ ಪಡೆದು ತನ್ನ ಮಕ್ಕಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ತೋಡಿಕೊಂಡಿದ್ದರು.  ಆಘಾತಗೊಂಡ ಮಕ್ಕಳು ಸ್ಥಳೀಯ ಜನಪ್ರತಿನಿಧಿಗಳ ಮೂಲಕ ರಿಯಾಧ್ ನಗರದ ಭಾರತೀಯ ದೂತಾವಾಸವನ್ನು ಸಂಪರ್ಕಿಸಿದ್ದರು ಹಾಗೂ ಹ್ಯೂಮನ್ ರೈಟ್ಸ್ ಫೌಂಡೇಶನ್ ಮೊರೆಯೂ ಹೋಗಿದ್ದರು.  ಇದೀಗ ಜೆಡ್ಡಾದ ಕಾನ್ಸುಲ್ ಜನರಲ್ ಅವರು ಜೆಸಿಂತಾ ಮಾಲಕ ಅಬ್ದುಲ್ಲಾ ಅಲ್ಮುತೈರಿ ಸಂಪರ್ಕದಲ್ಲಿದ್ದು  ಆತ ತಾನು ಆಕೆಯ ಎರಡು ವರ್ಷದ ಸೇವೆಗೆ ಏಜಂಟನಿಗೆ 24,000 ರಿಯಾಲ್ (ರೂ 5 ಲಕ್ಷ) ನೀಡಿರುವುದಾಗಿ ಆ ಹಣ ಹಿಂದಿರುಗಿಸಿದರೆ ಆಕೆಯನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾನೆ.  ಜೆಸಿಂತಾರಿಂದ ರೂ 5 ಲಕ್ಷದ ತನಕ ಪಡೆದಿದ್ದ ಮುಂಬೈ ಏಜಂಟ್ ಶಭಾ ಖಾನ್ ಎಂಬವನನ್ನೂ ಹುಡುಕುವ ಪ್ರಯತ್ನ ನಡೆಯುತ್ತಿದೆ. ಪೊಲೀಸ್ ದೂರು ಕೂಡ ದಾಖಲಾಗಿದೆ. ಜೆಸಿಂತಾ ಪುತ್ರ ವೆಲ್ರಾಯ್ ಶಿರ್ವ ಕಾಲೇಜಿನಲ್ಲಿ ಬಿಕಾಂ ಕಲಿಯುತ್ತಿದ್ದರೆ ಪುತ್ರಿ ವೆಲಿಟಾ ಪಿಯುಸಿ ಮುಗಿಸಿದ್ದಾಳೆ. ಜೆಸಿಂತಾ ಮಾಲಕ ತಮಗೆ ಪ್ರತಿ ತಿಂಗಳು ರೂ 17,000 ಕಳುಹಿಸುತ್ತಿದ್ದು ಅದುವೇ ತಮಗೆ ಜೀವನಾಧಾರವೆಂದು ಆತ ಹೇಳುತ್ತಾನೆ.