ತೆರಿಗೆ ಜೊತೆ ಕಸ ವಿಲೇ ಮುಂಗಡ ಶುಲ್ಕ ವಸೂಲಿಗೆ ಮುಂದಾದ ಕಾರ್ಕಳ ಪುರಸಭೆ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಸ್ವಚ್ಛ ಬಾರತ ಅಭಿಯಾನಯಡಿ ಕಸದ ನಿರ್ವಹಣೆಗೆ ಕ್ರಮ ಕೈಗೊಂಡಿದ್ದ ಕಾರ್ಕಳ ಪುರಸಭೆ ಇದೀಗ ವಾರ್ಷಿಕ ತೆರಿಗೆ ಜತೆಗೆ ಕಸ ವಿಲೇವಾರಿ ಮೊತ್ತವನ್ನು ಮುಂಗಡವಾಗಿ ಪಡೆದುಕೊಳ್ಳಲು ತೀರ್ಮಾನಿಸಿದ್ದು, ಜನತೆಗೆ ಹೊರೆಯಾಗಿ ಪರಿಣಮಿಸಿದೆ.

ಈ ಹಿಂದೆ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುವ ಕ್ರಮ ಜಾರಿಯಲ್ಲಿದ್ದು, ಕಸ ಕೊಂಡೊಯ್ಯುವ ವಾಹನಕ್ಕೆ ಪ್ರತಿ ಮನೆಗಳಿಂದ ಮಾಸಿಕ 50 ರೂ.ನಂತೆ, ಅಂಗಡಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಮಾಸಿಕ 200 ರೂ ಹಾಗೂ ಸಭಾಂಗಣಗಳಿಗೆ ಮಾಸಿಕ 1000 ರೂ ನಿಗದಿಗೊಳಿಸಲಾಗಿತ್ತು.

ಪ್ರಸ್ತುತ ಈ ಶುಲ್ಕ ಬದಲಾವಣೆಯಾಗಿದ್ದು ಕಟ್ಟಡದ ಚದರಡಿಯ ಮೇಲೆ ಶುಲ್ಕ ನಿಗದಿಗೊಳಿಸಲಾಗಿದೆ. 1000 ಚದರಡಿಯ ಮನೆಗೆ ರೂ 900 ಶುಲ್ಕವನ್ನು ಮನೆತೆರಿಗೆಯೊಂದಿಗೆ ಮುಂಗಡವಾಗಿ ಪಾವತಿಸಬೇಕಾಗುತ್ತದೆ. ಆದರೆ ಈ ನಿಯಮವು ಅಂಗಡಿ ಮಾಲಿಕರಿಗೆ ವರದಾನವಾಗಿದ್ದು, ಈ ಹಿಂದೆ ತಿಂಗಳಿಗೆ 200 ರೂ.ನಂತೆ ಪಾವತಿಸುತ್ತಿದ್ದ ಅಂಗಡಿ ಮಾಲಿಕರು ಇದೀಗ ಚದರಡಿಯ ಆಧಾರದಲ್ಲಿ ಕೇವಲ 210 ರೂ ಪಾವತಿಸಿಸಿದರೆ ಸಾಕಾಗುತ್ತದೆ.

ಪುರಸಭೆಯ ಈ ನಿರ್ಧಾರದಿಂದ ಕಾರ್ಕಳ ನಾಗರಿಕರು ಕಂಗಾಲಾಗಿದ್ದು, ಜತೆಗೆ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ತಾವೇ ಮನೆಯಲ್ಲಿಯೇ ಪೈಪ್ ಕಾಂಪೋಸ್ಟ್ ಮೂಲಕ ಗೊಬ್ಬರವನ್ನಾಗಿ ಪರಿವರ್ತಿಸಿ ವಿಲೇವಾರಿ ಮಾಡುತ್ತಿದ್ದವರೂ ಸೇರಿದಂತೆ, ಈ ಹಿಂದೆ ಕಸ ಸಂಗ್ರಹದ ವಾಹನಗಳು ಮನೆಗಳಿಂದ ತರುವ ಕಸ ಕೂಡ ಈ ನಿಯಮಕ್ಕೆ ಒಳಪಡುತ್ತಿರುವುದು ಇನ್ನೊಂದು ಗೊಂದಲಕ್ಕೆ ಕಾರಣವಾಗಿದೆ.